ವಿಜಯಪುರ: ವಿಜಯಪುರ ನಗರದ ಅಭಿವೃದ್ಧಿಗಾಗಿ ಹಿಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿ 125 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ನಮ್ಮ ಪಕ್ಷದ ಮುಖ್ಯಮಂತ್ರಿಯಾದ ಮೇಲೆ ಯಡಿಯೂರಪ್ಪ ಕೊರೊನಾ ಹೆಸರಲ್ಲಿ ಅನುದಾನವನ್ನು ವಾಪಸ್ ತೆಗೆದುಕೊಂಡಿದ್ದಾರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಸಮ್ಮುಖದಲ್ಲಿಯೇ ಯತ್ನಾಳ್ ಅಸಮಾಧಾನ ಹೊರಹಾಕಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂ. ಅನುದಾನ ಬಂದಿತ್ತು. ಆದರೆ, ನಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಈ ಅನುದಾನವನ್ನು ವಾಪಸ್ ಪಡೆದಿದ್ದಾರೆ. ಕೊರೊನಾ ನೆಪವೊಡ್ಡಿ ಅನುದಾನ ವಾಪಸ್ ಪಡೆದಿದ್ದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಹಾಗೂ ತಮ್ಮದೇ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧ ಯತ್ನಾಳ್ ಮಾಡಿರುವ ಆರೋಪ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.








