ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳಿಗೆ ಜನ್ಮ ಷಷ್ಠಿಯ ಸಂಭ್ರಮ. ಈ ಹಿನ್ನೆಲೆಯಲ್ಲಿ ಪುತ್ತಿಗೆ ಮಠದಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾಣಿಯೂರು ಬಂಧುವರ್ಗ, ಪುತ್ತಿಗೆ ವಿದ್ಯಾಪೀಠದ ಹಳೆ ವಿದ್ಯಾರ್ಥಿಗಳು ಮತ್ತು ಶ್ರೀಮಠದ ಸಿಬ್ಬಂದಿ ವರ್ಗ ಸುಗುಣೇಂದ್ರ ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ ಆಯೋಜಿಸಿದ್ದರು.


ಗುರುವಂದನೆ ಕಾರ್ಯಕ್ರಮಕ್ಕೂ ಮುನ್ನ ಪುತ್ತಿಗೆ ಮಠದಲ್ಲಿ ಜನ್ಮನಕ್ಷತ್ರ ಶಾಂತಿ, ನವಗ್ರಹ ಸಹಿತ ಶನಿಶಾಂತಿ, ಧನ್ವಂತರಿ ಹೋಮ, ವಿರಜಾಹೋಮ, ತಂತ್ರಸಾರ ಮಂತ್ರದ ಹೋಮಗಳೊಂದಿಗೆ ಸಂಸ್ಥಾನದ ದೇವರಿಗೆ ತುಳಸಿ ಲಕ್ಷಾರ್ಚನೆ ಕಾರ್ಯಕ್ರಮಗಳು ನಡೆದವು.
ನಂತರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀಗೆ ತೀರ್ಥಾಭಿಷೇಕ ಮಾಡುವ ಮೂಲಕ ಅಷ್ಠಮಠಗಳ ಮಠಾಧೀಶರು ಗುರುವಂದನೆ ಸಲ್ಲಿಸಿದರು. ಪುತ್ತಿಗೆ ಶ್ರೀಗಳು ತುಳಸಿಯಲ್ಲಿ ಅಲಂಕೃತ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಕಿರಿಯ ಯತಿ ಸುಶೀಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರೆ, ಓಂಪ್ರಕಾಶ್ ಭಟ್ ಸಂಪಾದಿಸಿರುವ `ಕೃತಿ ಸ್ಮತಿ’ ಪುಸ್ತಕವನ್ನು ಶ್ರೀಗಳಿಗೆ ಅರ್ಪಿಸಲಾಯಿತು. ತಿರುಪತಿ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಂದ ತಂದ ಶೇಷಶಾಸ್ತ್ರ ಪ್ರಸಾದಗಳನ್ನು ಪುತ್ತಿಗೆ ಶ್ರೀಗಳಿಗೆ ಸಮರ್ಪಿಸಲಾಯಿತು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಪುತ್ತಿಗೆ ಶ್ರೀಗಳು, ಭಗವಂತನು ಎಲ್ಲರಿಗೂ ಒಂದು ಉತ್ತಮ ಅವಕಾಶ ನೀಡುತ್ತಾನೆ. ಮತ್ತೆ ಮತ್ತೆ ಅಂತಹ ಅವಕಾಶಗಳು ಒದಗಿ ಬರಲಾರವು. ಆದ್ದರಿಂದ ಅದನ್ನು ಸಂಶಯಪಡದೇ ಸದುಪಯೋಗಪಡಿಸಿಕೊಳ್ಳುವಂತೆ ಸುಗುಣೇಂದ್ರ ಶ್ರೀಗಳು ಆಶೀರ್ವಚನ ನೀಡಿದರು.









