ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಲಿಂಕ್ ಇದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ ಬೆನ್ನಲ್ಲೇ ನಟರು ಡ್ರಗ್ಸ್ ತೆಗೆದುಕೊಳ್ಳುವುದು ನಿಜ ಎಂದು ನಟ ಆದಿ ಲೋಕೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆದಿ ಲೋಕೇಶ್, ಕೆಲ ಯುವ ನಟರು ಶೂಟಿಂಗ್ ಟೈಮಲ್ಲಿ ಡ್ರಗ್ಸ್ ತಗೋತಾರೆ. ಅವರು ಡ್ರಗ್ಸ್ ತೆಗೆದುಕೊಂಡಿರುವುದು ನಮ್ಮ ಗಮನಕ್ಕೂ ಬಂದಿದೆ ಎಂದು ಹೇಳಿರುವುದು ಸ್ಫೋಟಕ ತಿರುವು ಪಡೆದುಕೊಂಡಂತಾಗಿದೆ.
ಕೆಲವರು ಸಣ್ಣ ಅಥವಾ ದಪ್ಪ ಆಗಲು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದಾರೆ. ಸ್ಟಿರಾಯ್ಡ್ ಕೂಡ ಒಂದು ರೀತಿಯ ಡ್ರಗ್ಸ್ ಎಂದಿರುವ ಆದಿ ಲೋಕೇಶ್, ಯುವ ನಟರು, ಇತ್ತೀಚೆಗೆ ಚಿತ್ರರಂಗಕ್ಕೆ ಕಾಲಿಟ್ಟವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಡ್ರಗ್ಸ್ ತೆಗೆದುಕೊಂಡರೆ ಸ್ಮೆಲ್ ಬರಲ್ಲ. ಹೀಗಾಗಿ ಡ್ರಗ್ಸ್ ತೆಗೆದುಕೊಂಡು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಅವರು ಡ್ರಗ್ಸ್ ತಗೊಂಡಿರೋದು ಎಲ್ಲರಿಗೂ ಗೊತ್ತಾಗುತ್ತದೆ.
ಡ್ರಗ್ಸ್ ತೆಗೆದುಕೊಂಡವರು ಅವರದೇ ಲೋಕದಲ್ಲಿ ತೇಲಾಡುತ್ತಿರುತ್ತಾರೆ ಎಂದು ಆದಿ ಲೋಕೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ರೇವ್ ಪಾರ್ಟಿಗಳಲ್ಲಿ ರಾಜಕಾರಣಿಗಳ ಮಕ್ಕಳು ಬರ್ತಾರೆ. ಹೀಗಾಗಿ ಅವರ ಸಂಪರ್ಕ ಹೊಂದಿರುವ ನಟರು ಡ್ರಗ್ಸ್ ತೆಗೆದುಕೊಳ್ಳುತ್ತಿರಬಹುದು. ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನಾನು ಹೇಳಲ್ಲ. ಕೊರೊನಾದಿಂದಾಗಿ ಕಳೆದ 6 ತಿಂಗಳಿಂದ ನಾನು ಮನೆಯಿಂದ ಹೊರಬಂದಿಲ್ಲ. ಹೀಗಾಗಿ ಅವರ ಹೆಸರು ಹೇಳೋದು ಈಗ ಕಷ್ಟ ಎಂದಿದ್ದಾರೆ ಆದಿ ಲೋಕೇಶ್.








