ಚಿತ್ರದುರ್ಗ : ನಗರದ ಕೆಎಸ್ ಆರ್ ಟಿಸಿ ಡಿಪೋ ಆವರಣದಲ್ಲಿ ಹಿಂದೂ ಮತ್ತು ಮುಸ್ಲಿಮರು ಸೇರಿ ರಕ್ಷಾ ಗಣಪತಿ ದೇಗುಲವನ್ನು ನಿರ್ಮಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ. ಈ ದೇಗುಲ ಹಿಂದೂ ಸಂಪ್ರದಾಯದಂತೆ ನಿರ್ಮಾಣವಾಗಿದ್ದು, ಗೋಪುರ ಇಸ್ಲಾಂ ಸಂಪ್ರದಾಯದ ಗುಂಬಜ್ ಮಾದರಿಯಲ್ಲಿದೆ.
ಇಲ್ಲಿ ಕೆಎಸ್ಆರ್ಟಿಸಿಯ & ಸುಮಾರು 400 ನೌಕರರು ಇದ್ದಾರೆ. ಅದರಲ್ಲಿ 350 ಜನ ಹಿಂದೂಗಳು, 30ಕ್ಕೂ ಹೆಚ್ಚು ಮುಸ್ಲಿಮರು ಇದ್ದಾರೆ. ದೇಗುಲ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದ್ದಾರೆ. ಹೀಗಾಗಿ ಒಟ್ಟು 8 ಲಕ್ಷ ವೆಚ್ಚದಲ್ಲಿ ದೇಗುಲ ನಿರ್ಮಾಣವಾಗಿದೆ.
ಈ ದೇಗುಲ ನಿರ್ಮಾಣದ ಹಿಂದೆ ಒಂದು ರೋಚಕೆ ಇದೆ. 2018ರಲ್ಲಿ ಡಿಪೋ ಸ್ಥಳಾಂತರಗೊಂಡಿತು. ಅದಕ್ಕೂ ಹಿಂದೆ ಡಿಪೋದಲ್ಲಿ ಗಣೇಶ, ಆಂಜನೇಯ ಸ್ವಾಮಿ ದೇಗುಲ ಇದ್ದು, ಪ್ರತಿ ಶನಿವಾರ ಎಲ್ಲರೂ ಒಗ್ಗೂಡಿ ಅನ್ಯೋನ್ಯವಾಗಿ ಪೂಜೆ ಸಲ್ಲಿಸುತ್ತಿದ್ದರು. ಆದ್ರೆ ಡಿಪೋ ಸ್ಥಳಾಂತರಗೊಂಡ ಬಳಿಕ ಪೂಜಾ ಕಾರ್ಯ ನಿಂತಿತು. ನೂತನ ಡಿಪೋ ಜಾಗದಲ್ಲಿ ದೇಗುಲ ನಿರ್ಮಾಣ ಮಾಡುವಂತಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡದ್ದರಂತೆ.
ನಂತರ ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳುತ್ತೇವೆ ಎಂದು ಎರಡೂ ಧರ್ಮಗಳ ನೌಕರರು ನೀಡಿದ ಭರವಸೆಯ ಮೇಲೆ ಈ ಹಿಂದೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆಗಿದ್ದ ಪ್ರಸನ್ನಕುಮಾರ್ ಕೆ. ಬಾಲನಾಯಕ್ ಒಪ್ಪಿಗೆಯ ಜತೆಗೆ ದೇಣಿಗೆಯನ್ನು ನೀಡಿದರು. ಮೊದಲಿನಂತೆಯೇ ಆಚರಣೆ ಮುಂದುವರಿಯಬೇಕು ಎಂಬುದು ಮುಸ್ಲಿಂ ಆಗಿದ್ದರೂ ಆಂಜನೇಯ, ಗಣಪತಿಯ ಭಕ್ತರಾಗಿರುವ ಸಂಸ್ಥೆಯ ಹಿರಿಯ ನಿವೃತ್ತ ಚಾಲಕ ರಹೀಂ ಸಾಬ್ ಆಶಯವಾಗಿತ್ತು. ನಿವೃತ್ತ ಹಿರಿಯ ಚಾಲಕ ಎಚ್.ಜಿ.ರುದ್ರಪ್ಪ ಮಾರ್ಗದರ್ಶನದೊಂದಿಗೆ 2019ರ ಜೂನ್ನಲ್ಲಿ ಭೂಮಿಪೂಜೆಯೂ ನಡೆಯಿತು. 2020 ಆಗಸ್ಟ್ 20ರ ಸ್ವರ್ಣಗೌರಿ ಹಬ್ಬದಂದು ಕೆಎಸ್ಆರ್ಟಿಸಿ ವಾಹನದಲ್ಲೇ ಗಣಪತಿ ಮೂರ್ತಿ ತರುವ ಮೂಲಕ ಪ್ರತಿಷ್ಠಾಪನಾ ಕಾರ್ಯ ನೆರವೇರಿದೆ.








