ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ – ಆರೋಗ್ಯ ಸಚಿವಾಲಯ
ಹೊಸದಿಲ್ಲಿ, ಸೆಪ್ಟೆಂಬರ್04: ಒಬ್ಬ ವ್ಯಕ್ತಿಯು ಒಬ್ಬಂಟಿಯಾಗಿ ತನ್ನ ಸ್ವಂತ ಕಾರಿನಲ್ಲಿ ಚಾಲನೆ ಮಾಡುತ್ತಿದ್ದರೆ, ಮಾಸ್ಕ್ ಧರಿಸಬೇಕಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಬೇರೆ ಯಾವುದೇ ವ್ಯಕ್ತಿಯೊಂದಿಗೆ ಇಲ್ಲದ ಜನರು ಜಾಗಿಂಗ್ ಅಥವಾ ಸೈಕ್ಲಿಂಗ್ ಮಾಡುವಾಗ ಕೂಡ ಮಾಸ್ಕ್ ಧರಿಸಬೇಕಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವಾಲಯದ ಕೋವಿಡ್ -19 ಬ್ರೀಫಿಂಗ್‌ನಲ್ಲಿ ಗುರುವಾರ ವರದಿಗಾರರು ಏಕಾಂಗಿಯಾಗಿ ಕಾರು ಚಾಲನೆ ಮಾಡುವಾಗ ಮಾಸ್ಕ್ ಧರಿಸದಿದ್ದನ್ನು ಕಂಡು ಪೊಲೀಸರು ತಡೆದು ದಂಡ ವಿಧಿಸುವ ಕುರಿತು ಕೇಳಿದ ಪ್ರಶ್ನೆಗೆ ರಾಜೇಶ್ ಭೂಷಣ್ ಪ್ರತಿಕ್ರಿಯೆ ನೀಡಿದ್ದು, ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ನೀವು ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಅದನ್ನು ಚಾಲನೆ ಮಾಡುತ್ತಿದ್ದರೆ, ಮಾಸ್ಕ್ ಧರಿಸಬೇಕೆಂಬ ನಿಯಮವಿಲ್ಲ ಎಂದು ಹೇಳಿದರು.
ವ್ಯಾಯಾಮ ಮಾಡುವಾಗ, ಒಬ್ಬಂಟಿಯಾಗಿರುವ ಜನರು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ನಾಗರಿಕರು ಇನ್ನೊಬ್ಬರ ಜೊತೆ ಇದ್ದರೆ ಅಥವಾ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಮಾಸ್ಕ್’ಗಳನ್ನು ಧರಿಸಿ ದೈಹಿಕ ದೂರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಜನರು ದೈಹಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಈಗ ಜಾಗಿಂಗ್ ಮತ್ತು ಎರಡು ಮೂರು ಜನರ ಗುಂಪುಗಳಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಮಾಸ್ಕ್’ಗಳು ಕಡ್ಡಾಯವಾಗಿರುತ್ತವೆ. ಏಕೆಂದರೆ ಅವರು ಸೋಂಕಿಗೆ ಒಳಗಾಗುವ ಸಂಭವವಿರುತ್ತದೆ. ನೀವು ಏಕಾಂಗಿಯಾಗಿ ಸೈಕ್ಲಿಂಗ್ ಮಾಡುತ್ತಿದ್ದರೆ, ಮಾಸ್ಕ್’ಗಳನ್ನು ಧರಿಸಲು ಕಡ್ಡಾಯ ನಿಯಮವಿಲ್ಲ ಎಂದು ಅವರು ಹೇಳಿದರು.
ದೆಹಲಿ, ಪೊಲೀಸರು ತಮ್ಮ ಸ್ವಂತ ಕಾರುಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ ಮತ್ತು ಏಕಾಂಗಿಯಾಗಿ ಪಯಣಿಸುತ್ತಿದ್ದರೂ ಚಲನ್ ನೀಡುತ್ತಿದ್ದಾರೆ. ಕಳೆದ ತಿಂಗಳ TOI ವರದಿಯ ಪ್ರಕಾರ, ಮಾಸ್ಕ್’ವಿಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ದೆಹಲಿ ಪೊಲೀಸರು 1,200 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ದೇಶದಲ್ಲಿ ಐದು ರಾಜ್ಯಗಳಲ್ಲಿ 62% ಸಕ್ರಿಯ ಪ್ರಕರಣ ಪತ್ತೆಯಾಗಿದೆ ಎಂದು ಸರ್ಕಾರ ಗುರುವಾರ ಮಾಧ್ಯಮಗಳಿಗೆ ತಿಳಿಸಿದೆ. ಈ ಐದು ರಾಜ್ಯಗಳು ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು. ಭಾರತದಲ್ಲಿ ಪ್ರಸ್ತುತ 8,15,53 ಸಕ್ರಿಯ ಪ್ರಕರಣಗಳಿವೆ, ಅದರಲ್ಲಿ ಸುಮಾರು 25% ಪ್ರಕರಣಗಳು ಮಹಾರಾಷ್ಟ್ರದಲ್ಲಿ, 12.5% ಆಂಧ್ರಪ್ರದೇಶದಲ್ಲಿ, ಸುಮಾರು 12% ಕರ್ನಾಟಕದಲ್ಲಿ, 7% ಯುಪಿಯಲ್ಲಿ ಮತ್ತು 6.5% ಸಕ್ರಿಯ ಪ್ರಕರಣಗಳು ತಮಿಳುನಾಡಿನಿಂದ ದಾಖಲಾಗಿದೆ.








