ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಕಲರ್ ಫುಲ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದ್ರೆ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಎಫೆಕ್ಟ್ ಐಪಿಎಲ್ ಗೂ ತಟ್ಟುವ ಸಾಧ್ಯತೆಗಳಿವೆ.
ಹೌದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಸೋಮವಾರ ಬೆಂಗಳೂರು ನಗರದಲ್ಲಿ ಕರೋನಾ ವೈರಸ್ ಪ್ರಕರಣವೂ ಪತ್ತೆಯಾಗಿದ್ದು, ಹಾಗೆಯೇ ರಾಜ್ಯದ ನಾಲ್ವರಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿರುವುದನ್ನು ಆರೋಗ್ಯ ಸಚಿವರಾದ ಶ್ರೀರಾಮುಲು ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಮತ್ತು ಇತರ ನಗರಗಳಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯಲು ಐಪಿಎಲ್ ಪಂದ್ಯವನ್ನು ಆಯೋಜಿಸದಿರಲು ತೀರ್ಮಾನಿಸಿದೆ.
ಇನ್ನೊಂದೆಡೆ ಕೆಎಸ್‌ಸಿಎ ಕೂಡ ಸರ್ಕಾರದ ನಿರ್ಣಯಕ್ಕೆ ನಾವು ಬದ್ಧ ಎಂದು ಹೇಳಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಮ್ಯಾಚ್ ಗಳು ನಡೆಯುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ.








