ಬೆಂಗಳೂರು: ಸ್ಯಾಂಡಲ್‍ವುಡ್‍ನ ನಿದ್ದೆಗೆಡಿಸಿರುವ ಡ್ರಗ್ಸ್ ಮಾಫಿಯಾ ತನಿಖೆಗೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ನಟಿಯರಾದ ರಾಗಿಣಿ, ಸಂಜನಾ ಅರೆಸ್ಟ್ ಮಾಡಿ ವಿಚಾರಣೆ ಮುಂದುವರೆಸಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಸಹಾಯಕ ಆಯುಕ್ತ ಬಸವರಾಜ್ ನೇತೃತ್ವದ ಅಧಿಕಾರಿಗಳ ತಂಡ ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿರುವುದು ಕುತೂಹಲ ಮೂಡಿಸಿದೆ.
ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡ್ರಗ್ ಪೆಡ್ಲರ್ ವಿರೇನ್ ಖನ್ನಾನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿಯೇ ಇ.ಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ಸಂದೀಪ್ ಪಾಟೀಲ್ ಸಮ್ಮುಖದಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ವಿರೇನ್ ಖನ್ನಾ ನೀಡುವ ಹೇಳಿಕೆಗಳನ್ನು ಇ.ಡಿ ಅಧಿಕಾರಿಗಳು ದಾಖಲು ಮಾಡಿಕೊಳ್ಳುವ ಸಾಧ್ಯತೆ ಇದೆ.
ವಿರೇನ್ ಖನ್ನಾ, ಬೆಂಗಳೂರು ಮಾತ್ರವಲ್ಲ, ದೆಹಲಿ, ಮುಂಬೈ, ಗೋವಾ ಮಾತ್ರವಲ್ಲ ವಿದೇಶಗಳಲ್ಲೂ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡುತ್ತಿದ್ದನಂತೆ. ಹೀಗಾಗಿ ಈತನ ಡ್ರಗ್ಸ್ ಪಾರ್ಟಿಗಳಿಗೆ ಹವಾಲ ಹಣ ಬಳಕೆ ಮಾಡುತ್ತಿದ್ದನಾ, ಈತನ ಡ್ರಗ್ಸ್ ದಂಧೆ ಹಿಂದೆ ಹವಾಲ ಹಣ ಅಥವಾ ಬಿಟ್ ಕಾಯಿನ್ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆತನ ಹವಾಲ ಹಣದ ಮೂಲದ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.
ಜೊತೆಗೆ ಮಂಗಳವಾರ ವಿರೇನ್ ಖನ್ನಾನ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 8 ದೇಶಗಳ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲೂ ಇ.ಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.







