ಬೆಂಗಳೂರು: ನಾನು ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡೋನು ಎಂದು ಮೊದಲೇ ಹೇಳಿದ್ದೇನೆ. ಇದಕ್ಕೆ ನಾನು ಈಗಲೂ ಬದ್ಧವಾಗಿದ್ದೇನೆ ಎಂದು ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕಾರಣಕ್ಕೆ ಇತಿಹಾಸವಿದೆ. ನನ್ನ ಮೇಲೆ ದೊಡ್ಡ ನಂಬಿಕೆಯಿಟ್ಟು ಪಕ್ಷದ ಎಲ್ಲ ಕಾರ್ಯಕರ್ತರು ಅಭಿಮಾನಿಗಳು ಬಯಸಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಂದ ನನಗೆ ಕೆಪಿಸಿಸಿ ಅಧ್ಯಕ್ಷಗಾದಿಯ ಜವಾಬ್ದಾರಿಯನ್ನು ಕೊಡಿಸಿದ್ದಾರೆ. ಸೋನಿಯಾಗಾಂಧಿ ಸೇರಿದಂತೆ ಪಕ್ಷದ ಹಿರಿಯರಿಗೆ ನನ್ನ ಮೇಲೆ ಈ ಹಿಂದಿನಿಂದಲೂ ಭರವಸೆ ಇತ್ತೆಂದು ಹೇಳಿದರು.
ಇನ್ನು 1985ರಲ್ಲಿ ನನ್ನ ವಿದ್ಯಾರ್ಥಿ ದೆಸೆಯಲ್ಲೇ ನನ್ನ ಮೇಲೆ ನಂಬಿಕೆಯ ಇತ್ತು. ಆಗ ವಿಧಾನಸೌಧಕ್ಕೆ ಕರೆಸಿ ನನಗೆ ಜವಾಬ್ದಾರಿ ಕೊಟ್ಟಿದ್ದರು. ಆಗಿನಿಂದ ಈವರೆಗೆ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು.
ಇನ್ನು ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಐಸಿಸಿ ಘೋಷಣೆ ಮಾಡುತ್ತಿದ್ದಂತೆ ಕನಕಪುರದಲ್ಲಿ ಡಿಕೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಟ್ರಬಲ್ ಶೂಟರ್ ಗೆ ವಿಶ್ ಮಾಡಿದ್ದಾರೆ.
ಡಿಕೆಶಿಗೆ ಹೆಚ್ ಡಿ ಕೆ ವಿಶ್
ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು ಎಂದು ಹೆಚ್ ಡಿಕೆ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರಿಂದ ಅಭಿನಂದನೆ
ಕಾಂಗ್ರೆಸ್ ನಾಯಕರಾದ ಕೃಷ್ಣಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹ ಡಿ.ಕೆ. ಶಿವಕುಮಾರ್ ಅವರಿಗೆ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ.








