ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ರಾಜ್ಯ ಕಾಂಗ್ರೆಸ್ ಗೆ ಹೊಸ ಹುರುಪು ತಂದಿದೆ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಆದ್ರೆ ಜೆಡಿಎಸ್ ಗೆ ಮಾತ್ರ ತಳಮಳ ಶುರುವಾಗಿದೆ.
ಡಿ.ಕೆ. ಶಿವಕುಮಾರ್ ಕಳೆದ 26 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು. ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲಾ ಸಂದರ್ಭದಲ್ಲೂ ಪಕ್ಷದ ಟ್ರಬಲ್ ಶೂಟರ್ ಆಗಿ ನಿಂತು ಸಮಸ್ಯೆಯನ್ನು ನಿಭಾಯಿಸಿದರು. ಹೀಗಾಗಿ ಅವರ ಪಕ್ಷ ನಿಷ್ಠೆಯನ್ನು ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷಗಿರಿಯನ್ನು ನೀಡಿದೆ. ಈ ಮೂಲಕ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಂತರ 20 ವರ್ಷಗಳ ಬಳಿಕ ಒಕ್ಕಲಿಗ ಸಮುದಾಯದ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಮಾನ ದೊರೆತಂತಾಗಿದೆ. ಆದರೆ, ಮಾಜಿ ಸಿಎಂ ಹೆಚ್ ಡಿಕೆ ಜೊತೆಗಿನ ಸ್ನೇಹ ಡಿಕೆಶಿಗೆ ಟ್ರಬಲ್ ಆಗುತ್ತಾ? ಎಂಬ ಅನುಮಾನ ರಾಜಕೀಯ ವಿಶ್ಲೇಷಕರಲ್ಲಿ ಮೂಡಿದೆ.
ಹೆಚ್ ಡಿಕೆ ಪರ ಸಾಫ್ಟ್ ಕಾರ್ನರ್ ತೋರಿದರೆ ಪಕ್ಷಕ್ಕೆ ಡ್ಯಾಮೇಜ್
ರಾಜ್ಯದಲ್ಲಿ ಮೈತ್ರಿ ಸರ್ಕಾರಯಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯ ಪಾತ್ರವಹಿಸಿದ್ದರು. ಅದರಲ್ಲೂ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಪಣ ತೊಟ್ಟಿದ್ದ ಡಿಕೆಶಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದರು. ಆ ಪ್ರಯತ್ನದಲ್ಲಿ ವಿಫಲರಾಗಿದ್ದರು. ಆದ್ರೆ ಹೆಚ್ ಡಿಕೆ ಮತ್ತು ಡಿಕೆಶಿ ಆಪ್ತ ಸ್ನೇಹಿತರಾಗಿಯೇ ಮುಂದುವರೆದಿದ್ದಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ರಾಮನಗರ ಜಿಲ್ಲೆ ಮತ್ತು ರಾಜ್ಯದಲ್ಲಿ ಬಿಜೆಪಿ ಮಾತ್ರವಲ್ಲ ಜೆಡಿಎಸ್ ವಿರುದ್ಧವೂ ಹೋರಾಟ ನಡೆಸಬೇಕಿದೆ. ರಾಮನಗರ ವಿಚಾರದಲ್ಲಿ ಕುಮಾರಸ್ವಾಮಿ ವಿರುದ್ಧವೂ ಹೋರಾಟ ನಡೆಸಲೇಬೇಕಾದ ಸಂದಿಗ್ಧತೆಯಲ್ಲಿದ್ದಾರೆ.
ಒಂದು ವೇಳೆ ಅವರು ಹೆಚ್‌ಡಿಕೆ ಪರ ಸಾಫ್ಟ್ ಕಾರ್ನರ್ ತೋರಿದರೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಬಲಿಗರು ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಎಂದು ಹೈಕಮಾಂಡ್ ಗೆ ದೂರು ನೀಡಬಹುದು. ಇದು ಭವಿಷ್ಯದಲ್ಲಿ ಡಿಕೆಶಿ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಇದೆ.
ಮತ್ತೊಂದೆಡೆ ಜೆಡಿಎಸ್ ಗೆ ಇಷ್ಟು ದಿನ ಒಕ್ಕಲಿಗ ಮತಗಳೇ ಆಸ್ತಿ ಆಗಿದ್ದವು. ಆದ್ರೆ ಒಕ್ಕಲಿಗ ನಾಯಕ ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಿವುದು ಜೆಡಿಎಸ್ ಗೆ ಮರ್ಮಾಘಾತ ನೀಡಿದೆ. ಏಕೆಂದ್ರೆ ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯುವ ಚತುರತೆ ಡಿಕೆಶಿಗಿದೆ. ಇದರಿಂದಾಗಿ ಜೆಡಿಎಸ್ ಪಾಳಯದಲ್ಲಿ ನಡುಕ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.








