ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್ ಪುರ, ಶೃಂಗೇರಿ ತಾಲೂಕಿನ ವಿವಿಧೆಡೆ ಭಾರಿ ಮಳೆ ಬೀಳುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಕಳಸ ಸುತ್ತಮುತ್ತ ನಿನ್ನೆಯಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

ಹೆಬ್ಬಾಳೆ ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲೂ ಹೆಬ್ಬಾಳೆ ಸೇತುವೆ ಹಲವು ಬಾರಿ ಮುಳುಗಡೆಯಾಗಿತ್ತು. ಭದ್ರಾ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಕಿಗ್ಗ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ತುಂಗಾನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಶೃಂಗೇರಿ ಮಠದ ಗಾಂಧಿ ಮೈದಾನಕ್ಕೆ ತುಂಗಾನದಿ ನೀರು ನುಗ್ಗುವ ಸಾಧ್ಯತೆ ಇದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟ್ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.








