ಬೆಂಗಳೂರು : ಲಾಕ್ ಡೌನ್ ಮಾಡಿದ್ರೆ ಕಂಪ್ಲೀಟ್ ಲಾಕ್ ಡೌನ್ ಮಾಡಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬುಧವಾರ ಪ್ರಧಾನಿಗಳು ಕೊರೊನಾ ಸೋಂಕು ಹೆಚ್ಚಿರುವ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಪ್ರಧಾನಿಗಳು ಮುಖ್ಯಮಂತ್ರಿಗಳ ಬಳಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಿ ಸಲಹೆ ಕೇಳಿದ್ದಾರೆ.
ಒಂದು ಅಥವಾ 2 ದಿನ ಲಾಕ್ ಡೌನ್ ಮಾಡಿದ್ರೆ ಹೇಗೆ? ಪರಿಣಾಮಕಾರಿಯಾಗುತ್ತಾ ಈ ಬಗ್ಗೆ ಸರ್ಕಾರಗಳು ಪರಾಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗುತ್ತಾ ಎಂಬ ಚರ್ಚೆ ಶುರುವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಕೇಂದ್ರ ಹಾಗೂ ರಾಜ್ಯಗಳು ಕೊರೊನಾದೊಂದಿಗೆ ಬದುಕಿ ಎಂದು ಹೇಳುವ ಮೂಲಕ ನಮ್ಮ ಕೈಯಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ.
ಶನಿವಾರ, ಭಾನುವಾರದ ಲಾಕ್ ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾಡಿದರೇ ಕಂಪ್ಲೀಟ್ ಲಾಕ್ ಡೌನ್ ಮಾಡಬೇಕಿದೆ.
ಈ ಹಿಂದೆ ಲಾಕ್ ಡೌನ್ ತೆಗೆದು ಹಾಕಿದಾಗ ಕೋವಿಡ್ ಹೆಚ್ಚಳ ಆಗಿತ್ತು. ಆದರೆ ಆಗ ಲಾಕ್ ಡೌನ್ ಮುಂದುವರಿಸಬೇಕಿತ್ತು. ಅವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ತಪ್ಪು ನಿರ್ಧಾರ ಮಾಡಿತ್ತು.
ಈಗ ಸಣ್ಣ ಪ್ರಮಾಣದ ಲಾಕ್ ಡೌನ್ ಮಾಡಿದರೆ ಏನು ಪ್ರಯೋಜನಾ? ಸೋಂಕು ವ್ಯಾಪಕವಾಗಿ ಹರಡಿದೆ, ಒಂದು ದಿನ ಲಾಕ್ ಡೌನ್ ಮಾಡಿದರೆ ಪ್ರಯೋಜನಾ ಇಲ್ಲ, ಕಂಪ್ಲೀಟ್ ಲಾಕ್ ಡೌನ್ ಮಾಡಿ ಎಂದು ತಿಳಿಸಿದರು.







