ಬೆಂಗಳೂರು : ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎಂಬ ಚರ್ಚೆಗಳು ಶುರುವಾಗಿದ್ದು, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಕ್ ಡೌನ್ ಸುದ್ದಿಗಾರರು ಕೇಳಿದ ಪ್ರಶ್ನಿಗೆ ಉತ್ತರಿಸಿದ ಸುಧಾಕರ್, ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು 9 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.
ಅವರ ಸಲಹೆಯಂತೆ ಪರಿಣಾಮಕಾರಿಯಾಗಿ ಕೊರೊನಾ ನಿಯಂತ್ರಿಸುವ ಕೆಲಸವನ್ನು ಮಾಡುತ್ತೇವೆ. ಯಾವುದೇ ರೀತಿಯಲ್ಲಿ ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಲಾಕ್ ಡೌನ್ ಮಾಡಿದಾಗ ಜನಜೀವನ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಿತ್ತು. ಆರ್ಥಿಕ ಪರಿಸ್ಥಿತಿ ಅಧಃಪತನಕ್ಕೆ ಹೋಗಿತ್ತು. ಹೀಗಾಗಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಮೈಕ್ರೋ ಕಂಟೈನ್ಮೆಂಟ್ ವಲಯಗಳಲ್ಲಿ ಅಂದರೆ ಸೋಂಕಿತರ ಮನೆಯ ಸುತ್ತಮುತ್ತ ಪ್ರದೇಶದಲ್ಲಿ ಹೆಚ್ಚು ಟೆಸ್ಟ್ ಗಳನ್ನು ಮಾಡಲಾಗುವುದು ಮತ್ತು ಆ ಪ್ರದೇಶಗಳ ಬಗ್ಗೆ ಹೆಚ್ಚು ನಿಗಾ ವಹಿಸಲಾಗುವುದು ಎಂದು ತಿಳಿಸಿದರು.








