ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಕಿರುತೆರೆ ನಿರುಪಕಿ ಅನುಶ್ರೀ ಮಂಗಳೂರಿಗೆ ಹೊರಟಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಅನುಶ್ರೀ ಮಂಗಳೂರು ಸಿಸಿಬಿ ಹಾಗೂ ನಾರ್ಕೋರ್ಟಿಕ್ಸ್ ವಿಭಾಗದ ಪೊಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆ.
ನನಗೆ ಮಂಗಳೂರು ಸಿಸಿಬಿ ಪೊಲೀಸರ ನೋಟಿಸ್ ಸಿಕ್ಕಿದೆ. ಇಂದು ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮಗಳಲ್ಲಿ ನಾನು ನಟಿಸಿದ ಚಿತ್ರವೊಂದನ್ನು ಬಳಸಿ ನನ್ನನ್ನು ಅಪರಾಧಿ ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ, ವಿಚಾರಣೆಗೆ ಕರೆದ ಕೂಡಲೇ ನಾನು ಅಪರಾಧಿ ಅಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸತ್ಯವನ್ನು ದಾರಿ ತಪ್ಪಿಸಬಾರದು. ನಾನು ಪೊಲೀಸರ ವಿಚಾರಣೆಗೆ ಸಹಕಾರ ನೀಡುತ್ತೇನೆ. ವಿಚಾರಣೆ ಮುಗಿದು ಸತ್ಯಾಸತ್ಯತೆ ಹೊರಬರಲಿದೆ ಎಂದು ಅನುಶ್ರೀ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ.

ಸಿಸಿಬಿ ಪೊಲೀಸರ ನೋಟಿಸ್ ಬಂದ ಹಿನ್ನೆಲೆಯಲ್ಲಿ ವಕೀಲರನ್ನು ಸಂಪರ್ಕಿಸಿರುವ ಅನುಶ್ರೀ, ಮುಂದಿನ ಕಾನೂನು ಹೋರಾಟದ ಬಗ್ಗೆ ಸಲಹೆಗಳನ್ನು ಪಡೆದಿದ್ದಾರೆ.
ಅನುಶ್ರೀ ಡ್ರಗ್ಸ್ ತೆಗೆದುಕೊಳ್ತಾರೆ ಎಂದ ತರುಣ್ ರಾಜ್
ನಟಿ ಹಾಗೂ ನಿರೂಪಕಿ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿ ತರುಣ್ ರಾಜ್ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ನಾವು ಡ್ರಗ್ಸ್ ಪಾರ್ಟಿ ಮಾಡುತ್ತೇವೆ, ಆ ಪಾರ್ಟಿಗಳಲ್ಲಿ ಅನುಶ್ರೀ ಇರ್ತಾರೆ ಎಂದು ಅನುಶ್ರೀ ಸ್ನೇಹಿತನಾಗಿರುವ ಭರತ್ ರಾಜ್ ಬಾಯ್ಬಿಟ್ಟಿದ್ದಾನೆ. ಮೊದ ಮೊದಲು ಅನುಶ್ರೀ ಡ್ರಿಂಕ್ಸ್ ತೆಗೆದುಕೊಳ್ಳುತ್ತಿದ್ದಳು ಎಂದು ಹೇಳುತ್ತಿದ್ದ ತರುಣ್, ವಿಚಾರಣೆ ಚುರುಕುಗೊಳ್ಳುತ್ತಿದ್ದಂತೆ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾಗಿ ಒಂದೊಂದೇ ಸಂಗತಿಗಳನ್ನು ಬಹಿರಂಗ ಮಾಡುತ್ತಿದ್ದಾನೆ.
ಅನುಶ್ರೀ ಅವರನ್ನು ಒಮ್ಮೆ ಭೇಟಿಯಾಗಿದ್ದೆ ಎಂದು ಡ್ರಗ್ಸ್ ಪೆಡ್ಲರ್ ಹಾಗೂ ಬಂಧಿತ ಆರೋಪಿ ಕಿಶೋರ್ ಶೆಟ್ಟಿ ಗರ್ಲ್‍ಫ್ರೆಂಡ್ ಅಸ್ಕಾ ಹೇಳಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.








