ಯಾದಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಜನಜೀವನವನ್ನು ಮತ್ತಷ್ಟು ಹದಗೆಡಿಸಿದೆ. ರಾಯಚೂರು, ಯಾದಗಿರಿ, ಬಾಗಲಕೋಟೆ, ಕಲಬುರಗಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಟೊಣ್ಣೂರು ಗ್ರಾಮದಲ್ಲಿ ಗ್ರಾಮದಲ್ಲಿ ನೀರಲ್ಲಿ ಸಿಲುಕಿ ಅಂಗವಿಕಲನೊಬ್ಬ ಪರದಾಟ ನಡೆಸಿದ್ದ. ಕಾಲು ಸ್ವಾಧೀನವಿಲ್ಲದ ಕಾರಣ ಅಂಗವಿಕಲ ಶೇಖರಪ್ಪನ ಮನೆಯೊಳಗೆ ನೀರು ನುಗ್ಗಿತ್ತು. ಹೀಗಾಗಿ ಆತ ಮನೆಯಿಂದ ಹೊರ ಬರಲು ಪರದಾಟ ನಡೆಸಿದ್ದ. ಹೀಗಾಗಿ ತನ್ನನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ನೆರವಿನ ಹಸ್ತ ಚಾಚಿದ್ದಾರೆ.

ಜೊತೆಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ ಸೇತುವೆ ಮೂಲಕ ಬೈಕ್‍ನಲ್ಲಿ ಹಳ್ಳ ದಾಟಲು ಹೋಗುತ್ತಿದ್ದ ಯುವಕರ ಪೈಕಿ ಒಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ. ಈ ವೇಳೆ ಹಗ್ಗದ ಮೂಲಕ ಯುವಕನನ್ನು ರಕ್ಷಣೆ ಮಾಡಲಾಗಿದೆ.
ಸೇತುವೆ ಮುಳುಗಡೆ
ಗದಗ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದೆ. ನರಗುಂದ ಹಾಗೂ ಗುರ್ಲಕಟ್ಟಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.
ನರಗುಂದ ತಾಲೂಕಿನ ಹಿರೇಹಳ್ಳ ಉಕ್ಕಿ ಹರಿಯುತ್ತಿದ್ದು, ಹಿರೇಹಳ್ಳದ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಗುರ್ಲಕಟ್ಟಿ ಹಾಗೂ ಕಣಕೀಕೊಪ್ಪದಿಂದ ನರಗುಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.

ರಾಯಚೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಳೆ ಅಬ್ಬರಕ್ಕೆ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ.
ದೇವದುರ್ಗ ತಾಲ್ಲೂಕಿನ ಕೊಳೂರು ಗ್ರಾಮಕ್ಕೆ ಹಳ್ಳದ ನೀರು ನುಗ್ಗಿದೆ. ಊಟ ನಿದ್ದೆ ಇಲ್ಲದೆ ಪರದಾಡುತ್ತಿದ್ದು, ಮಳೆ ಅರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.








