ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಇಂದು ಬಜೆಟ್ ಅಧಿವೇಶನದ ಕಲಾಪವನ್ನು ಮಾರ್ಚ್ 26ರವರೆಗೆ ಮುಂದೂಡಿದ್ದು, ಇದೀಗ ಎರಡು ದಿನದೊಳಗೆ ಮುಖ್ಯಮಂತ್ರಿ ಕಮಲ್ ನಾಥ್ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಬಿಜೆಪಿ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಸರ್ಕಾರ 22 ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿದ್ದು, ಇಂದು ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರು.
ಇಂದು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು, ಸದನಕ್ಕೆ ಗೌರವ ಕೊಡಿ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಜಂಟಿ ಅಧಿವೇಶನದಲ್ಲಿ ಮಾತನಾಡಿದ ರಾಜ್ಯಪಾಲರು ಸಂವಿಧಾನದಂತೆ ನಡೆದುಕೊಳ್ಳಿ ಎಂದು ಹೇಳಿ ಹೊರನಡೆದಿದ್ದರು. ಬಳಿಕ ಸ್ಪೀಕರ್ ಇಂದಿನಿಂದ ನಡೆಯಬೇಕಿದ್ದ ಮಧ್ಯಪ್ರದೇಶದ ವಿಧಾನಸಭಾ ಅಧಿವೇಶನವನ್ನು ಕೊರೊನಾ ಭೀತಿಯಿಂದ ಮಾರ್ಚ್ 26 ಕ್ಕೆ ಮುಂದೂಡಿದರು. ಇದರಿಂದ ಮುಖ್ಯಮಂತ್ರಿ ಕಮಲ್ ನಾಥ್ ಬಹುಮತ ಸಾಬೀತು ಪರೀಕ್ಷೆಯಿಂದ ತಾತ್ಕಾಲಿಕವಾಗಿ ನಿರಾಳತೆ ಪಡೆದಿದ್ದರು. ಇದೀಗ ಬಿಜೆಪಿ ಎರಡು ದಿನದೊಳಗೆ ಮುಖ್ಯಮಂತ್ರಿ ಕಮಲ್ ನಾಥ್ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.








