ಆಸ್ಟ್ರೇಲಿಯಾ ಪ್ರವಾಸ: ಟೀಮ್ ಇಂಡಿಯಾ ಆಟಗಾರರಿಗೆ ಕಾಡಲಿದೆ ವಿರಹ ವೇದನೆ..!
ಆಸ್ಟ್ರೇಲಿಯಾ ಪ್ರವಾಸದ ವೇಳೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ವಿರಹ ವೇದನೆಯಾಗಲಿದೆ.
ಯಾಕಂದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಮ್ ಇಂಡಿಯಾ ಆಟಗಾರರು ತಮ್ಮ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ.
ಕೋವಿಡ್ ಮಾರ್ಗಸೂಚಿಗಳನ್ನು ಪರಿಪಾಲಿಸಬೇಕಾಗಿರುವುದರಿಂದ ಬಿಸಿಸಿಐ ಈ ಕ್ರಮವನ್ನು ತೆಗೆದುಕೊಂಡಿದೆ.
ಆದ್ರೆ ಸದ್ಯದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವು ಆಟಗಾರರು ತಮ್ಮ ಕುಟುಂಬದ ಜೊತೆಗಿದ್ದಾರೆ.
ಆದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಅನುಮತಿ ನೀಡಿಲ್ಲ.
ಇನ್ನು ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ 32 ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಆಯ್ಕೆ ಸಮಿತಿಗೆ ಸೂಚನೆ ನೀಡಿದೆ.
ಆಟಗಾರರು ಗಾಯ ಮತ್ತು ಅನಾರೋಗ್ಯದಿಂದ ಬಳಲಿದಾಗ ಬದಲಿ ಆಟಗಾರರನ್ನು ಭಾರತದಿಂದ ಕರೆತರಲು ಸಾಧ್ಯವಿಲ್ಲ.
ಜೈವಿಕ ಸುರಕ್ಷತೆಯೊಂದಿಗೆ ಈ ಸರಣಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ಟೂರ್ನಿಗೆ ದೊಡ್ಡ ತಂಡವನ್ನೇ ಆಯ್ಕೆ ಮಾಡಬೇಕಿದೆ.
ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಮೂರು ಟಿ-ಟ್ವೆಂಟಿ, ಮೂರು ಏಕದಿನ ಪಂದ್ಯಗಳ ಟೂರ್ನಿ ಹಾಗೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಟೀಮ್ ಇಂಡಿಯಾ ಆಟಗಾರರು ದುಬೈನಿಂದಲೇ ನೇರವಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಪಡಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಆಡಿಲೇಡ್ ನಲ್ಲಿ ನಡೆಯಲಿದ್ದು, ಇದು ಹೊನಲು ಬೆಳಕಿನಡಿಯಲ್ಲಿ ನಡೆಯಲಿದೆ.
ಒಟ್ಟಾರೆ, 32 ಆಟಗಾರರು ಸೇರಿದಂತೆ ಒಟ್ಟು 50 ಮಂದಿಯ ಟೀಮ್ ಇಂಡಿಯಾ ಎರಡು ತಿಂಗಳುಗಳ ಕಾಲ ಆಸ್ಟ್ರೇಲಿಯಾ ಪ್ರವಾಸದಲ್ಲಿರಲಿದೆ.