ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಬಾರದು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮದುವೆ ಕಾರ್ಯ ನಡೆಸುತ್ತಿದ್ದ ಆರೋಪದ ಮೇಲೆ ಮಧುಮಕ್ಕಳಿಬ್ಬರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಕಂದಮಲ್ ಜಿಲ್ಲೆಯ ನೌಪಾಡ ಗ್ರಾಮದ ಪರಮೇಶ್ವರ್ ಭುಕ್ತ ತಮ್ಮ ಮದುವೆಯ ಆರತಕ್ಷತೆಗೆ 90ಕ್ಕಿಂತ ಅಧಿಕ ಜನರನ್ನು ಆಹ್ವಾನಿಸಿದ್ದರು. ಇದರ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಧುಮಗನನ್ನು ಬಂಧಿಸಿದ್ದಾರೆ. ಇನ್ನೊರ್ವ ಗೊಚ್ಚಪಡ ಪೊಲೀಸ್ ಠಾಣಾ ವ್ಯಾಪ್ತಿಯ ಖಜರಿಗಾಂವ್ ಗ್ರಾಮದ ಬುಡಕಟ್ಟು ಜನಾಂಗದ ವರ ಬಿಜು ಕನ್ಹಾರ್ ಮದುವೆ ಮೆರವಣಿಗೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ.
ಲಾಕ್ ಡೌನ್ ಮಾರ್ಗಸೂಚಿಯ ಪ್ರಕಾರ ನಿಯಮ ಉಲ್ಲಂಘಿಸಿದರೆ ಭಾರತೀಯ ದಂಡಸಂಹಿತೆ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಅಲ್ಲದೆ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕ ಜೀವನ ತೊಂದರೆ ನೀಡಿದರೆ ಸೆಕ್ಷನ್ 269ರ ಅಡಿಯಲ್ಲೂ ಕೇಸು ವಿಧಿಸಲಾಗುತ್ತದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಸೆಕ್ಷನ್ 271ರ ಅಡಿಯಲ್ಲಿ ಪ್ರಕರಣ ದಾಖಲಾಗುವುದು. ಇಂತಹ ಪ್ರಕರಣಗಳಿಗೆ 6 ತಿಂಗಳು ಸಜೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.
ದೇಶದಲ್ಲಿ ಈವರೆಗೆ 470ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 10 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ.. ಮನೆಯಲ್ಲಿದ್ದು ಸೋಂಕಿನಿಂದ ದೂರವಿರಿ.






