ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿ, ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಎಂಬ ಮಹಾಮಾರಿಯನ್ನು ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದು, ವೈರಸ್ ಹರಡುವಿಕೆ ತಡೆಗಟ್ಟುವುದಕ್ಕೆ ಭಾರತದ ಕ್ರಮಗಳು ಮಾದರಿ ಎಂದು ಪರಿಗಣಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮೈಕಲ್ ಜೆ ರಿಯಾನ್, ಮಾಧ್ಯಮಗಳೊಂದಿಗೆ ಭಾರತ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು, ಕೊರೋನಾ ವೈರಸ್ ನಿಯಂತ್ರಿಸುವ ಅಗಾಧ ಶಕ್ತಿ ಭಾರತಕ್ಕೆ ಇದೆ. ಈ ಹಿಂದೆಯೂ ಭಾರತ ಹಲವಾರು ಸಾಂಕ್ರಾಮಿಕ ರೋಗಗಳನ್ನು ಒಳ್ಳೆಯ ರೀತಿಯಲ್ಲಿ ನಿಯಂತ್ರಿಸಿ ನಿರ್ನಾಮ ಮಾಡಿರುವ ಇತಿಹಾಸವಿದೆ ಎಂದು ಹೇಳಿದ್ದಾರೆ.
ಭಾರತ ಹಾಗೂ ಚೀನಾದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರಗಳು ತೆಗೆದುಕೊಳ್ಳುವ ಕ್ರಮಗಳು, ನಿರ್ಧಾರಗಳ ಮೇಲೆ ಕೊರೋನಾ ವೈರಸ್ ನ ನಿಯಂತ್ರಣ ಅವಲಂಬಿತವಾಗಿರುತ್ತವೆ ಎಂದು ಮೈಕಲ್ ಜೆ ರಿಯಾನ್ ಹೇಳಿದ್ದಾರೆ.
ಭಾರತ, ಸಣ್ಣ ಸಿಡುಬು ಸೇರಿದಂತೆ ಹಲವು ರೋಗಗಳ ವಿರುದ್ಧದ ಹೋರಾಟದ ನೇತೃತ್ವ ವಹಿಸಿ ವಿಶ್ವವನ್ನು ಮುನ್ನಡೆಸಿ ಯಶಸ್ವಿಯಾಗಿತ್ತು. ಭಾರತ ಕೈಗೊಳ್ಳುವ ಕಠಿಣ ಕ್ರಮಗಳು ನಿಜಕ್ಕೂ ಮಹತ್ವದ್ದಾಗಿರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮೈಕಲ್ ಜೆ ರಿಯಾನ್ ಪೊಲಿಯೋ ವಿಷಯದಲ್ಲೂ ಭಾರತ ಯಶಸ್ವಿಯಾಗಿ ವಿಶ್ವವನ್ನು ಮುನ್ನಡೆಸಿದೆ. ಭಾರತಕ್ಕೆ ರೋಗ ತಡೆಗಟ್ಟುವ ಅಗಾಧವಾದ ಶಕ್ತಿ ಸಾಮರ್ಥ್ಯಗಳಿವೆ ಆದ್ದರಿಂದ ಕೊರೋನಾ ನಿರ್ನಾಮಕ್ಕೆ ಭಾರತವೇ ನಿರ್ಣಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.