ಪಕ್ಷ ಸಂಘಟನೆ : ಡಿಕೆಶಿ ಇಂದಿನಿಂದ ಕಲ್ಯಾಣ ಕರ್ನಾಟಕ ಪ್ರವಾಸ
ಬೆಂಗಳೂರು : ಮುಂಬರುವ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಕಟ್ಟಪ್ಪ ಇಂದಿನಿಂದ ನಾಲ್ಕು ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಕಲ್ಯಾಣ ಕರ್ನಾಟಕ ಪ್ರವಾಸ ಇಂದಿನಿಂದ ನ.25ರವರೆಗೆ ನಿಗದಿಯಾಗಿದೆ.
ಡಿಕೆಶಿ ಬಳ್ಳಾರಿ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅದರಂತೆ ಇಂದು ಬೆಳಗ್ಗೆ ಏಳು ಗಂಟೆಗೆ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದ್ದಾರೆ.
ತಮ್ಮ ಸದಾಶಿವನಗರ ನಿವಾಸದಿಂದ ರಸ್ತೆ ಮಾರ್ಗದಲ್ಲಿ ಹೊರಟಿರುವ ಅವರು ಮಧ್ಯಾಹ್ನ 12 ಗಂಟೆಗೆ ಹೊಸಪೇಟೆ ತಲುಪಲಿದ್ದಾರೆ.
ಹೊಸಪೇಟೆಯಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಭೆ ನಡೆಸಲಿದ್ದಾರೆ.
ಸಂಜೆ 5 ಗಂಟೆಯಿಂದ 6 ಗಂಟೆಯವರೆಗೂ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿಯಾಗಲಿದ್ದು, ನಂತರ ರಾತ್ರಿ ಕೊಪ್ಪಳ ಜಿಲ್ಲೆಯ ಶಾಸಕರು, ಪರಾಜಿತ ವಿಧಾನಸಭೆ ಅಭ್ಯರ್ಥಿಗಳು ಹಾಗೂ ಹಿರಿಯ ಮುಖಂಡರನ್ನು ಭೇಟಿ ಮಾಡಿ ಹೊಸಪೇಟೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ನ.23 ರಂದು ರಾಯಚೂರು ಜಿಲ್ಲೆಗೆ ತೆರಳಿರುವ ಟ್ರಬಲ್ ಶೂಟರ್, ಮಸ್ಕಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಉಪ ಚುನಾಣೆಯ ಬಗ್ಗೆ ರಣತಂತ್ರ ರೂಪಿಸಲಿದ್ದಾರೆ.
ಮಧ್ಯಾಹ್ನ ಭತ್ತದ ಪ್ರೋತ್ಸಾಹಧನ ನೀಡಲು ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ನ.24 ರಂದು ಬೆಳಗ್ಗೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಬಸವಕಲ್ಯಾಣದತ್ತ ಪ್ರಯಾಣ ಬೆಳೆಸಲಿದ್ದಾರೆ. ಬಸವಕಲ್ಯಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಭಾಗವಹಿಸಿಲಿದ್ದಾರೆ.
ಮಧ್ಯಾಹ್ನ 3:30ಕ್ಕೆ ಬೀದರ್ ಜಿಲ್ಲೆಗೆ ತೆರಳಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
25 ರಂದು ಹೈದರಾಬಾದ್ ನಿಂದ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.










