ನವದೆಹಲಿ : ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1.7 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡುವ ಮೂಲಕ ಸರಿಯಾದ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂದು ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಲಿರುವ ಸಮಾಜದ ವಿವಿಧ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 1.7 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಈ ವಿಶೇಷ ಪ್ಯಾಕೇಜ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಹಣಕಾಸಿನ ನೆರವು ನೀಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಸರಿಯಾದ ದಿಕ್ಕಿನ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಿದೆ. ಆದರೆ, ಇದರ ಜೊತೆಗೆ ರೈತರು, ದೈನಂದಿನ ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ವೃದ್ಧರಿಗೆ ಸಾಲ ಸೌಲಭ್ಯ ನೀಡುವ ಯೋಜನೆಯನ್ನೂ ರೂಪಿಸಬೇಕಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.








