ಜಗತ್ತಿನಾದ್ಯಂತ ತಲ್ಲಣ ಉಂಟು ಮಾಡಿರುವ ಕೋವಿಡ್ 19 ವೈರಾಣು ಸೋಂಕು, ಭಾರತೀಯ ಮೂಲದ ಮೂರು ವರ್ಷದ ಮಗು ಸೇರಿದಂತೆ 73 ಮಂದಿಯಲ್ಲಿ ಕಾಣಿಸಿಕೊಂಡು, ಸಿಂಗಾಪುರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 631ಕ್ಕೆ ಏರಿದೆ.
ಕೇವಲ ಒಂದೇ ದಿನದಲ್ಲಿ ಭಾರತೀಯ ಮೂಲದ ಮೂರು ವರ್ಷದ ಮಗು ಸೇರಿದಂತೆ 73 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು , ಬುಧವಾರ ಸಿಂಗಾಪುರದಲ್ಲಿ ಕೋವಿಡ್ 19 ಮಹಾಮಾರಿ ಸೋಂಕು ತಗುಲಿದವರ ಸಂಖ್ಯೆ 631ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
73 ಮಂದಿಯಲ್ಲಿ 38 ಮಂದಿ ಯುರೋಪ್, ಉತ್ತರ ಅಮೆರಿಕ, ಏಷಿಯನ್ ದೇಶಗಳಿಗೆ ಪ್ರವಾಸಕ್ಕೆ ತೆರಳಿ ಸಿಂಗಾಪುರಕ್ಕೆ ವಾಪಸ್ಸಾಗಿದ್ದರು. ಉಳಿದವರು ಸ್ಥಳೀಯವಾಗಿಯೇ ಇದ್ದು ಸೋಂಕು ತಗುಲಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.
ವರದಿಗಳ ಪ್ರಕಾರ ಶಿಶು ವಿಹಾರ( ಕಿಂಡರ್ ಗಾರ್ಟೆನ್)ಗೆ ಸಂಬಂಧಿಸಿದಂತೆ 18 ಕೊರೋನಾ ವೈರಲ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ ಕಿಂಡರ್ ಗಾರ್ಟನ್ ನ ಪ್ರಾಂಶುಪಾಲರು, ನಾಲ್ಕು ಮಂದಿ ಪ್ರಾಂಶುಪಾಲರ ಕುಟುಂಬ ಸದಸ್ಯರು ಮತ್ತು 14 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಸೇರಿದೆ. ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಕ್ಷದ ಪಿಸಿಎಫ್ ಸೆಂಟರ್ ನ ಎಲ್ಲಾ ಶಾಲೆಗಳನ್ನು ಗುರುವಾರದಿಂದ ನಾಲ್ಕು ದಿನಗಳ ಕಾಲ ಬಂದ್ ಮಾಡುವಂತೆ ಆದೇಶಿಸಿರುವುದಾಗಿ ತಿಳಿಸಿದೆ. ಡೋವರ್ ಕೋರ್ಟ್ ಇಂಟರ್ ನ್ಯಾಶನಲ್ ಶಾಳೆಯ ಮೂವರು ಉದ್ಯೋಗಿಗಳಿಗೆ ಕೋವಿಡ್ 19 ಸೋಂಕು ತಗುಲಿದ್ದು, ಈ ಶಾಲೆಯನ್ನು ಕೋವಿಡ್ ಪೀಡಿತ ಎಂದು ಘೋಷಿಸಲಾಗಿದೆ.








