ಟಾಪ್ 10 ನ್ಯೂಸ್ @8PM : ದಿನದ ಪ್ರಮುಖ ಸುದ್ದಿಗಳು.. ರೈತ ಪ್ರತಿಭಟನೆ ಅಪ್ ಡೇಟ್ಸ್
ಭಾರತ್ ಬಂದ್ ಅಪಡೇಟ್ಸ್…ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ : ‘ಕೈ’ ಕಪ್ಪುಪಟ್ಟಿ, ಮೋದಿ ಅಣಕು ಶವಯಾತ್ರೆ..!
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿ , ಚಿಕ್ಕಮಗಳೂರು, ಬಾಲಕೋಟೆ , ಕೊಪ್ಪಳದಲ್ಲಿ ಪ್ರತಿಭಟನೆ ತೀವ್ರತೆ ಪಡೆದಿತ್ತು. ಉಳಿದಂತೆ ಬಹುತೇಕ ಎಲ್ಲೆಡೆಗಳಿಂದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಇತ್ತ ರಾಜ್ಯ ಕಾಂಗ್ರೆಸ್ ನಾಯಕರು ಸಹ ಪ್ರತಿಭಟನೆಗೆ ಸಾಥ್ ನೀಡಿದ್ದರು. ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ವಿಧಾನಸೌಧದ ಆವರಣದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ರು.
ಆದ್ರೆ ಪಂಜಾಬ್, ಹರಿಯಾಣ ಸೇರಿದಂತೆ ಬಿಜೆಪಿಯೇತ್ತರ ರಾಜ್ಯಗಳಿಂದ ಪ್ರತಿಭಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಉಳಿದಂತೆ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ದೆಹಲಿಯಲ್ಲಿ ಕಳೆದ 13 ದಿನಗಳಿಂದ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ.
ಕಾಂಗ್ರೆಸ್ ಮುಳುಗುತ್ತಿರೋ ಹಡಗು, ಕಪ್ಪು-ಬಿಳಿ ಪಟ್ಟಿಯನ್ನಾದರೂ ಧರಿಸಲಿ: ಕೈ ವಿರುದ್ಧ ರಾಜಾಹುಲಿ ಕಿಡಿಕಿಡಿ
ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮುಳುಗಿ ಹೋಗುತ್ತಿರುವ ಹಡಗು. ಅವರು ಕಪ್ಪು-ಬಿಳಿ ಯಾವ ಬಣ್ಣದ ಪಟ್ಟಿಯನ್ನಾದರೂ ಧರಿಸಲಿ. ಅವರನ್ನು ಯಾರು ಕೇಳುತ್ತಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.
ಇಂದಿನ ಭಾರತ್ ಬಂದ್ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್‍ವೈ, ಭಾರತ್ ಬಂದ್ ಎಲ್ಲಿಯೂ ಯಶಸ್ವಿಯಾಗಿಲ್ಲ, ಬೆಂಗಳೂರಿನಲ್ಲಿಯೂ ಯಶಸ್ವಿಯಾಗಲ್ಲ ಎಂದು ಹೇಳಿದ್ದಾರೆ.
ಕೃಷಿ ಕಾಯ್ದೆಗಳು ರೈತಪರ ಎಂದು ಪ್ರಧಾನಿ ಮೋದಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರೈತಪರವಾದ ಸರ್ಕಾರ ನಮ್ಮದು. ರೈತ ಪರವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಭಾರತ ಬಂದ್ ಎಲ್ಲೂ ಯಶಸ್ವಿಯಾಗಿಲ್ಲ. ಬೆಂಗಳೂರಿನಲ್ಲೂ ಯಶಸ್ವಿಯಾಗಲ್ಲ. ವಾಸ್ತವಿಕ ಅಂಶಗಳನ್ನು ಗಮನಿಸಬೇಕು, ರಾಜಕೀಯ ಕಾರಣಕ್ಕಾಗಿ ಬಂದ್‍ಗೆ ಕರೆ ನೀಡುವುದು ಸರಿ ಇಲ್ಲ ಎಂದರು.
ಕರ್ನಾಟಕದ ಜನ, ಬೆಂಗಳೂರು ಜನ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ರಾಜಕೀಯಕ್ಕಾಗಿ ಬಂದ್ ಮಾಡೋದು ಸರಿಯಲ್ಲ ಎಂದು ಯಡಿಯೂರಪ್ಪ ಟೀಕಿಸಿದ್ದಾರೆ.
ಆಂಧ್ರದಲ್ಲಿ ನಿಗೂಢ ರೋಗ: 450 ಜನರಿಗೆ ಸೋಂಕು, ಒಂದು ಬಲಿ
ಆಂಧ್ರಪ್ರದೇಶದಲ್ಲಿ ಪತ್ತೆಯಾಗಿರುವ ನಿಗೂಡ ರೋಗಕ್ಕೆ ಸುಮಾರು 450 ಜನರು ತುತ್ತಾಗಿದ್ದು, ಆಸ್ಪತ್ರೆಯಲ್ಲಿ , ಚಿಕಿತ್ಸೆ ಮುಂದುವರೆದಿದೆ. ಈಗಾಗಲೇ ನಿಗೂಢ ಕಾಯಿಲೆಯಿಂದಾಗಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಸಂಕಷ್ಟದ ನಡುವೆಯೇ ಮತ್ತೊಂದು ನಿಗೂಢ ಕಾಯಿಲೆ ದೇಶದ ಜನರ ಆತಂಕ ಹೆಚ್ಚಿಸಿದೆ. ಈ ಸೋಂಕು ಹರಡುತ್ತಿರುವುದಕ್ಕೆ ಕಾರಣವೇನು, ಯಾವ ರೀತಿ ಹರಡುತ್ತಿದೆ ಇವೆಲ್ಲದದರ ಮಾಹಿತಿ ಈವರೆಗೂ ಸ್ಪಷ್ಟವಾಗಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ನೀರಿನ ಮಲಿನೀಕರಣದಿಂದಾಗಿ ಈ ಸೋಂಕು ಹರಡುತ್ತಿದೆ ಎಂದು ಹೇಳಲಾಗ್ತಿದೆ. ಇತ್ತ ವೈದ್ಯರ ತಂಡ ಈ ಬಗ್ಗೆ ಸಂಶೋಧನೆಯಲ್ಲೇ ತಲ್ಲೀನರಾಗಿದ್ದಾರೆ.
ಭಾರತ್ ಬಂದ್ | ಅಂಬಾನಿ, ಅದಾನಿಗಳ ಕೈಗೊಂಬೆ: ಮೋದಿಗೆ ಸಿದ್ದು ಗುದ್ದು
ಬೆಂಗಳೂರು: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ನ ಹಿರಿಯ ಮುಖಂಡರು ಹಾಗೂ ಶಾಸಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಭಾರತ್ ಬಂದ್ ಬೆಂಬಲಿಸಿ ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ಡಾ.ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿ ಕೊಡುತ್ತಿದೆ. ರೈತರ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ರೈತರ ಜೊತೆಗೆ ಇದೆ. ಮುಂದೆ ಕೂಡ ರೈತರ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಮೋದಿ ಸರ್ಕಾರ ರೈತ ವಿರೋಧಿಯಾಗಿದೆ. ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದೆ. ಎಪಿಎಂಸಿ, ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದಿದ್ದಾರೆ. ಕರ್ನಾಟಕದಲ್ಲೂ ಲೇಬರ್ ಆಕ್ಟ್, ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಕೇಂದ್ರ ಸರ್ಕಾರ ನೆಪ ಮಾತ್ರಕ್ಕೆ ಅಷ್ಟೇ ಇದೆ. ಬಿಜೆಪಿ ಸರ್ಕಾರ ಅಂಬಾನಿ, ಅದಾನಿಯ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡ್ತಿದೆ.
ದೇಶದಲ್ಲಿ ಹಲವು ರಾಜಕೀಯ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ರೈತರನ್ನು ಸರ್ವನಾಶ ಮಾಡಲು ಹೊರಟಿದೆ. ಎಪಿಎಂಸಿ ಮುಚ್ಚಲು ಇದು ಸೂಕ್ತ ಕಾಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ ಎಂದು ಮೋದಿ ಹೇಳುವ ಮೋದಿ ಡೋಂಗಿ. ಸುಳ್ಳು ಹೇಳುವುದರಲ್ಲಿ ಮೋದಿ ನಿಸ್ಸೀಮರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಭಾರತ್ ಬಂದ್ : ಮಸೂದೆಯಿಂದ ರೈತರಿಗೆ ಅನುಕೂಲ ಎಂದ ಸಿಎಂ
ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈರ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಭಾರತ್ ಬಂದ್ ಹಿನ್ನೆಲೆ ಇಂದು ಸಂಪೂರ್ಣ ಭಾರತ್ ಬಂದ್ ಆಗಿದ್ದು ನೂತನ ಕಾಯ್ದೆಗಳು ವಿರೋಧಿಸಿ ದೇಶದ್ಯಾಂತ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಕಾಯ್ದೆ ವಾಪಸ್ ಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಯಡಿಯೂರಪ್ಪ, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ.
ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಖಚಿತವಾಗಿ ಮುಂದುವರಿಯಲಿದೆ. ಜೊತೆಗೆ ರೈತರಿಗೆ ಹೆಚ್ಚಿನ ಅವಕಾಶ, ಆಯ್ಕೆ ಮತ್ತು ಆದಾಯ ಹೆಚ್ಚಿಸಲು ನೂತನ ಕಾಯ್ದೆ ನೆರವಾಗಲಿದೆ.
ಇನ್ನೊಂದು ಟ್ವೀಟ್ ಮಾಡಿ, ರಾಜಕೀಯ ಅಸ್ತಿತ್ವಕ್ಕಾಗಿ ಕೇಂದ್ರ ಸರ್ಕಾರದ ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ಹಿಂದೆ ಅದರ ಪರವಾಗಿದ್ದವು.
ಈಗ ಮಸೂದೆ ವಿರುದ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತರಿಗೆ ಆಗುವ ಅನುಕೂಲತೆಗಳನ್ನು ತಪ್ಪಿಸಲು ನಡೆಸುತ್ತಿರುವ ವಿರೋಧವನ್ನು ಒಪ್ಪಲಾಗದು. ಇದರ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ ಎಂದು ತಿಳಿಸಿದ್ದಾರೆ.
ಇಂದು ಭಾರತ್ ಬಂದ್ ಆಯ್ತು | ನಾಳೆ ಬೆಂಗಳೂರಲ್ಲಿ ರೈತರ ಬಾರುಕೋಲು ಚಳವಳಿ..!
ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ತಂದಿವೆ ಎಂದು ಆರೋಪಿಸಿ ಇಂದು ಭಾರತ್ ಬಂದ್‍ಗೆ ಕರೆ ನೀಡಿದ್ದ ರೈತಪರ ಸಂಘಟನೆಗಳು, ನಾಳೆ ಬೆಂಗಳೂರಿನಲ್ಲಿ ಬೃಹತ್ ಬಾರುಕೋಲು ಚಳವಳಿ ನಡೆಸಲು ನಿರ್ಧರಿಸಿವೆ.
ಇಂದಿನ ಭಾರತ್ ಬಂದ್‍ಗೆ ಬೆಂಗಳೂರು ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟಕ್ಕೇ ಸುಮ್ಮನಾಗದ ರೈತ ಸಂಘಟನೆಗಳು ನಾಳೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೆ ಬಾರುಕೋಲು ಚಳವಳಿ ನಡೆಸಿ ಮುತ್ತಿಗೆ ಹಾಕಲಾಗುತ್ತಿದೆ. ಈ ಬಾರುಕೋಲು ಚಳವಳಿಯಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ತರಾತುರಿಯಲ್ಲಿ ಭಾರತ್ ಬಂದ್‍ಗೆ ಕರೆ ನೀಡಿದ ಪರಿಣಾಮ ಕೇವಲ ರಾಷ್ಟ್ರೀಯ ಹೆದ್ದಾರಿಗಳನ್ನು ಮಾತ್ರ ಬಂದ್ ಮಾಡಲು ತೀರ್ಮಾನಿಸಿದೆವು. ಹೀಗಾಗಿ ವ್ಯವಸ್ಥಿತವಾಗಿ ಭಾರತ್ ಬಂದ್ ಮಾಡಲು ಆಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರೈತರ ಹೋರಾಟ ನಿರಂತರವಾಗಿರಲಿದೆ. ಡಿಸೆಂಬರ್ 10ಕ್ಕೆ ವಿಧಾನಮಂಡಲ ಅಧಿವೇಶನ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಬಾರುಕೋಲು ಚಳವಳಿ ನಡೆಸಲಾಗುತ್ತಿದೆ. ರೈತರ ಹೋರಾಟಕ್ಕೆ ಸರ್ಕಾರಗಳು ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕರವೇಯಿಂದ ನಾಳೆ ರಾಜಭವನ್ಕೆ ಮುತ್ತಿಗೆ
ಇತ್ತ ರೈತ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ನಾಳೆ ಬಾರುಕೋಲು ಚಳವಳಿ ನಡೆಸಿದರೆ, ಮತ್ತೊಂದೆಡೆ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಾಳೆ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಜಾಥಾ ನಡೆಸಲಿದೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಬಿಬಿಎಂಪಿ ಕಚೇರಿಯಿಂದ ರಾಜಭವನವರೆಗೆ ಜಾಥಾ ನಡೆಯಲಿದೆ. ಜಾಥಾದಲ್ಲಿ 3 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಜಾಥಾ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಇಂದು ವೇಳೆ ಜಾಥಾ ತಡೆಗೆ ಸರ್ಕಾರ ಹಾಗೂ ಪೊಲೀಸರು ಯತ್ನಿಸಿದರೆ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ : ಕೇಂದ್ರ ಸರ್ಕಾರಕ್ಕೆ ಸುಬ್ರಮಣಿಯನ್ ಚಾಟಿ
ನವದೆಹಲಿ : ದೇಶದಲ್ಲಿ ಕಳೆದ 18 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.65 ರೂ. ಏರಿಕೆ ಆಗಿದ್ದರೆ ಡೀಸೆಲ್ ಬೆಲೆ 3.41 ರೂ. ಏರಿಕೆಯಾಗಿದೆ. ಈ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಮಾರಾಟ ಮಾಡುವುದು ಭಾರತ ಸರ್ಕಾರ ಜನರ ಮೇಲೆ ಮಾಡುತ್ತಿರುವ ಶೋಷಣೆ. ಪೆಟ್ರೋಲ್ ರಿಫೈನರಿಗಳಲ್ಲಿ ಪ್ರತಿ ಲೀಟರ್ ಬೆಲೆ 30 ರೂ. ಆಗುತ್ತದೆ. ತೆರಿಗೆ ಮತ್ತು ಪೆಟ್ರೋಲ್ ಪಂಪ್ ಗಳ ಕಮಿಷನ್ ನಿಂದಾಗಿ ಉಳಿದ 60 ರೂ. ಹೆಚ್ಚಳವಾಗುತ್ತದೆ.
ನನ್ನ ದೃಷ್ಟಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು ಗರಿಷ್ಟ 40 ರೂ.ಗೆ ಮಾರಾಟ ಮಾಡಬೇಕು ಎಂದು ಬರೆದುಕೊಂಡಿದ್ದಾರೆ. 2018ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈಯಲ್ಲಿ ಪೆಟ್ರೋಲ್ ದರ 90 ರೂ. ಗಡಿ ದಾಟಿದೆ. ಔರಂಗಬಾದ್ 91.57 ರೂ., ಇಂದೋರ್ 91.58 ರೂ.ಗೆ ಏರಿಕೆಯಾಗಿದೆ. ಸೋಮವಾರ ಒಂದು ಬ್ಯಾರಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 48.74 ಡಾಲರ್(3,600 ರೂ.) ಆಗಿದೆ.
ಜೈಲಲ್ಲಿ ಕನ್ನಡ ಕಲಿತ ಚಿನ್ನಮ್ಮಗೆ ಭಾರಿ ನಿರಾಸೆ
ಬೆಂಗಳೂರು : ಸನ್ನಡತೆ ಹಾಗೂ 135 ದಿನಗಳ ರಜೆ ಕಳೆದು ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ತಮಿಳುನಾಡು ಮಾಜಿ ಸಿಎಂ ದಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಜೈಲಧಿಕಾರಿಗಳಿಗೆ ಮನವಿ ಪತ್ರ ಬರೆದಿದ್ದರು.
ಇದೀಗ ಈ ಅರ್ಜಿಯನ್ನು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ನಿಮ್ಮನ್ನು ಅವಧಿಗೂ ಯಾಕೆ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದಾರೆ. ಅವರ ನಾಲ್ಕು ವರ್ಷದ ಜೈಲು ಶಿಕ್ಷೆ 2021 ಫೆ.15ಕ್ಕೆ ಮುಕ್ತಾಯವಾಗುತ್ತೆ.
ಜೈಲಲ್ಲಿ ಕನ್ನಡ ಕಲಿತ ಶಶಿಕಲಾ: ನಾಲ್ಕು ವರ್ಷದ ಜೈಲುವಾಸದಲ್ಲಿ ಶಶಿಕಲಾ ತರಕಾರಿ ಬೆಳೆದಿದ್ದು, ಬೆಳೆದ ತರಕಾರಿಯನ್ನು ಜೈಲಿನಲ್ಲಿ ತಯಾರಾಗುವ ಅಡುಗೆಗೆ ಬಳಕೆ ಮಾಡಲಾಗಿದೆ
ಜೊತೆಗೆ ಜೈಲಿನಲ್ಲಿ ನಲಿಕಲಿ ಮೂಲಕ ಕನ್ನಡ ಕಲಿತಿದ್ದಾರೆ. ಇದಲ್ಲದೆ ಶಶಿಕಲಾ ಅವರು ಸಂಪೂರ್ಣವಾಗಿ ಕನ್ನಡ ಅಭ್ಯಾಸ ಮಾಡಿದ್ದಾರೆ.
ಕನ್ನಡ ಓದಲು ಹಾಗೂ ಬರೆಯಲು ಕಲಿತು ಕಲಿಕೆಯ ಕೋರ್ಸ್ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಅನ್ನದಾತರ ಹೋರಾಟಕ್ಕೆ ಶಿವಣ್ಣ ಸಾಥ್ : ರೈತರ ಬೆನ್ನಿಗೆ ನಿಂದ ಚಂದನವನ..!
ಕೇಂದ್ರದ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಕಳೆದ 13 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂದು ಇದೇ ಭಾಗವಾಗಿ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಇತ್ತ ಸ್ಯಾಂಡಲ್ ವುಡ್ ತಾರೆಯರು ಸಹ ಅನ್ನದಾತರ ಹೆಗಲಿಗೆ ನಿಂತಿದ್ದಾರೆ.
ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಹ ರೈತರಿಗೆ ಬೆಂಬಲ ನೀಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಶಿವರಾಜ್ ಕುಮಾರ್ ಅವರು , ‘ರೈತ ದೇಶದ ಬೆನ್ನೆಲುಬು, ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದು ರೈತರ ಪ್ರತಿಭಟನೆಗೆ ಸಪೋರ್ಟ್ ಮಾಡಿದ್ದಾರೆ.
ಶಶಿ , ಬಿಗ್ ಬಾಸ್ ಸ್ಪರ್ಧಿ
ಬಿಗ್‌ಬಾಸ್ ಖ್ಯಾತಿಯ ಶಶಿ, ರೈತ ಹೋರಾಟದ ಪರ ನಿಂತಿದ್ದು, ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿರುವ ಅವರು ಕಳೆದ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೆವು, ಆದರೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಲಿಲ್ಲ. ಈ ಸರ್ಕಾರವು ತನಗೆ ತೋಚಿದ್ದೆ ಸರಿ ಎಂಬ ಧೋರಣೆಯೊಂದಿಗೆ ಮುಂದೆ ಸಾಗುತ್ತಿದೆ. ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸಿ, ಕಾಯ್ದೆಯಲ್ಲಿನ ನಕಾರಾತ್ಮಕ ಅಂಶಗಳನ್ನು ತೆಗೆದು ಸಕಾರಾತ್ಮಕ ಅಂಶಗಳನ್ನು ಉಳಿಸಿಕೊಂಡರೆ, ಕೇಂದ್ರ ಸರ್ಕಾರಕ್ಕೂ ಸೂಕ್ತ, ರೈತರಿಗೂ ಸೂಕ್ತ. ಅನ್ನ-ತರಕಾರಿ ತಿನ್ನುವ ಪ್ರತಿಯೊಬ್ಬರು, ರೈತ ಹೋರಾಟವನ್ನು ಬೆಂಬಲಿಸಬೇಕು ಎಂದಿದ್ದಾರೆ.
ಕವಿರಾಜ್
ಹಾಡುರಚನೆಗಾರ ಮತ್ತು ನಿರ್ದೇಶಕರಾಗಿರುವ ಕವಿರಾಜ್ ಅವರು ಸಹ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕಿವವಿರಾಜ್ ಅವರು ‘ಹೊಸ ರೈತ ಮಸೂದೆಯಿಂದ ಅಂತಿಮವಾಗಿ ರೈತರಿಗಿಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಸಾಮಾನ್ಯ ನಾಗರೀಕರೇ. ಮೂರು ಹೊತ್ತಿನ ತುತ್ತಾಗಿ ಪ್ರತಿ ಜನರ ಪ್ರತೀ ದಿನದ ಅವಶ್ಯಕತೆಯಾದ ಕೃಷಿ , ಆಹಾರ ಉತ್ಪನ್ನಗಳ ಉತ್ಪಾದನೆ ಮತ್ತು ಸರಬರಾಜು ಜಾಲವು ಒಂದು ಬಾರಿ ಸಂಪೂರ್ಣವಾಗಿ ಕಾರ್ಪೋರೇಟ್ ಕಂಪೆನಿಗಳ ಏಕಸ್ವಾಮ್ಯದ ಕಪಿಮುಷ್ಟಿಗೆ ಬಂದರೆ ಮುಗಿಯಿತು. ಖಂಡಿತಾ ಅದು ರೈತರ ಅಥವಾ ಗ್ರಾಹಕರ ಹಿತಕಾಯುವುದಿಲ್ಲ. ಅದರ ಮೊದಲ ಗುರಿಯೇ ತನ್ನ ‘ಕಿಲ್ಲಿಂಗ್ ಇನ್ಸ್ಟಿಂಕ್ಟ್’ ಉಳ್ಳ ಸ್ಪರ್ಧಾತ್ಮಕತೆಯಿಂದ ಕೆಲವೇ ವರ್ಷಗಳಲ್ಲಿ ಪರ್ಯಾಯ ವ್ಯವಸ್ಥೆ ಆಗಿರುವ ಎಪಿಎಂಸಿ ಮತ್ತು ಇನ್ನಿತರ ವ್ಯವಸ್ಥೆಯನ್ನು ಮಟ್ಟಹಾಕುವುದು. ಎಪಿಎಂಸಿ ವ್ಯವಸ್ಥೆ , ಈಗಿರುವ ದಲ್ಲಾಳಿ ವ್ಯವಸ್ಥೆ ಲಾಭಕೋರತನದಲ್ಲಿ ಮೀನಾದರೆ ಕಾರ್ಪೊರೇಟ್ ವ್ಯವಸ್ಥೆ ತೀರದ ಹಸಿವಿನ ತಿಮಿಂಗಿಲವಿದ್ದಂತೆ. ಎಪಿಎಂಸಿ ವ್ಯವಸ್ಥೆಗೆ ಕೇವಲ ಸರಜರಾಜಿನ ಮೇಲೆ ಹಿಡಿತ ಇತ್ತಷ್ಟೇ. ಆದರೆ ಹೊಸ ಕೃಷಿ ಕಾಯಿದೆ ಕಾರ್ಪೋರೇಟ್ ಗಳಿಗೆ ಉತ್ಪಾದನೆಯ ಮೇಲೂ ಹಿಡಿತ ಸಾಧಿಸಲು ಅವಕಾಶ ಕೊಡುತ್ತದೆ. ಅದು ಅತ್ಯಂತ ಅಪಾಯಕಾರಿ
ಕಾರ್ಪೊರೇಟ್ ಕುಳಗಳು ತಮ್ಮಲ್ಲಿರುವ ಅಪಾರ ಬಂಡವಾಳ ಹಾಗೂ ತಮ್ಮ ಕೈ ಗೊಂಬೆ ಆಗಿರುವ ರಾಜಕೀಯ ವ್ಯವಸ್ಥೆಯನ್ನು ಬಳಸಿ ಕೆಲವೇ ವರ್ಷಗಳಲ್ಲಿ ಅದರ ಹೊರತಾಗಿ ಇನ್ನಾರ ಕೈಗೂ ಕೃಷಿ ಉತ್ಪನ್ನಗಳು ಸಿಗದಂತೆ ಚಕ್ರವ್ಯೂಹ ರಚಿಸುತ್ತದೆ. ನಂತರ ದಿನನಿತ್ಯದ ಆಹಾರಗಳನ್ನು ಚಂದವಾಗಿ ಪ್ಯಾಕಿಂಗ್ ಮಾಡೀ ಮಿರಮಿರ ಮಿಂಚುವ ಶೋರೂಂಗಳಲ್ಲಿ ಇಟ್ಟು ಮನಬಂದ ಬೆಲೆ ನಿಗದಿ ಮಾಡುತ್ತಾರೆ. ( ತಿಂಗಳಿಗೆ 150 ರೂಪಾಯಿಗೆ ಕೇಬಲ್ ವ್ಯವಸ್ಥೆಯಲ್ಲಿ 300 ಚಾನೆಲ್ ನೋಡುತ್ತಿದ್ದ ಜಾಗದಲ್ಲಿ ಕಾರ್ಪೋರೇಟ್ ಕಂಪೆನಿಗಳ ಪ್ರವೇಶವಾಗಿ ಐನೂರು,ಸಾವಿರ ಕೊಟ್ಟು ಒಂದಷ್ಟು ಸೆಲೆಕ್ಟೆಡ್ ಚಾನೆಲ್ಸ್ ನೋಡಿದಂತೆ ) ಉಳ್ಳವರೇನೋ “ಆಹಾ ಭಾರತ ಅಮೇರಿಕಾವಾಗಿದೆ” ಎಂದು ಕೊಂಡು ತಿನ್ನುತ್ತಾರೆ . ಆದರೆ ಸಾಮಾನ್ಯ ಜನರಿಗೆ ತಳ್ಳು ಗಾಡಿಯವರ ಬಳಿ ಚೌಕಾಸಿ ಮಾಡಿ ಹತ್ತಿಪ್ಪತ್ತು ರೂಪಾಯಿ ಕಡಿಮೆ ಕೊಟ್ಟು , ಒಂದೆರೆಡು ಎಕ್ಸ್ಟ್ರಾ ಹಾಕಿಸಿಕೊಂಡು ಬಂದಂತಲ್ಲ. ದುಬಾರಿ ತರಕಾರಿ ಧಾನ್ಯಗಳನ್ನು ಕೊಳ್ಳಲಾಗದೆ ಬರೀ ಗಂಜಿ ಕುಡಿಯಬೇಕಾಗುತ್ತಷ್ಟೇ. ನಿಜಾ ಎಂದರೆ ಇದು ರೈತಹೋರಾಟಕ್ಕಿಂತ ಜನಸಾಮಾನ್ಯರ ಹೋರಾಟ ಆಗಬೇಕಿತ್ತು.
ಆದರೆ ಜನಸಾಮಾನ್ಯರಿಗೆ ತಮ್ಮ ಬುಡಕ್ಕೆ ಬರುವವರೆಗೆ ಇದೆಲ್ಲಾ ಅರ್ಥವಾಗದಷ್ಟು ಹಗಲುಗುರುಡು ಆವರಿಸಿದೆ’. ಎಂದು ಬರೆದುಕೊಂಡಿದ್ದಾರೆ.
ಇನ್ನೂ ರೈತರ ಪ್ರತಿಭಟನೆಗೆ ನಟ ಚೇತನ್ , ನಟ ಪ್ರಕಾಶ್ ರೈ ಸಹ ಬೆಂಬಲಿಸಿದ್ದಾರೆ.
ನವೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವ್ದು ಗೊತ್ತಾ?
ಚಿರು ಪುತ್ರ, ಮೇಘನಾ ರಾಜ್ ಗೆ ಕೊರೊನಾ ಪಾಸಿಟಿವ್
ಬೆಂಗಳೂರು : ನಟ ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಮತ್ತು ಅವರ ಪುತ್ರನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಅಲ್ಲದೆ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಅವರಿಗೂ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಇತ್ತೀಚೆಗೆ ಮೇಘನಾ ರಾಜ್ ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ಸೋಂಕಿರುವುದು ದೃಢವಾಗಿತ್ತು.
ಹೀಗಾಗಿ ಕುಟುಂಬಸ್ಥರಿಗೆ ಟೆಸ್ಟ್ ಮಾಡಿಸಿದಾಗ ಎಲ್ಲರಿಗೂ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಮಾಹಿತಿ ನೀಡಿದ್ದು, ‘ನಮ್ಮ ಕುಟುಂಬದ ಎಲ್ಲರ ಮೇಲೂ ಕೊರೊನಾ ಪರಿಣಾಮ ಬೀರಿದೆ.
ಮೇಘನಾ ಮತ್ತು ಮಗುಗೆ ಮನೆಯಲ್ಲೇ ಐಸೊಲೇಟ್ ಆಗಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ.
ನಾನು ಮತ್ತು ಪ್ರಮೀಳಾ ಹಿರಿಯ ನಾಗರಿಕರಾದ ಕಾರಣ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಅಲ್ಲ ಆದುದರಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಈ ಮೊದಲು ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel