ಪರಿಷತ್ ನಲ್ಲಿ ಗದ್ದಲ : ಯಾರದ್ದು ತಪ್ಪು..? ಯಾರದ್ದು ಸರಿ..?
ಬೆಂಗಳೂರು : ದೇಶದ ಮುಂದೆ ರಾಜ್ಯದ ಮರ್ಯಾದೆಯನ್ನು ಬುದ್ಧಿವಂತರ ಸದನ ಎನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯರು ಹರಾಜು ಹಾಕಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಷತ್ ನಲ್ಲಿ ಸದಸ್ಯರು ಪರಸ್ಪರ ಕಿತ್ತಾಡಿದ್ದಾರೆ.
ಇದಲ್ಲದೇ ಈ ಘಟನೆಗೂ ಮುನ್ನ ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ಕಲಾಪವನ್ನು ಇದೇ ಮೊದಲ ಬಾರಿಗೆ ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಠಿಸುವ ಜೊತೆಗೆ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡಿದೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇದನ್ನ ಸಭಾಪತಿಗಳು ತಿರಸ್ಕರಿಸಿದ್ದರು. ಇದು ಬಿಜೆಪಿಗರನ್ನು ಕೆರಳಿಸಿತ್ತು.
ಈ ಮಧ್ಯೆ ಇಂದು ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ಸೂಚಿಸಿತ್ತು. ಇದರ ಪರಿಣಾಮ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡದೇ ಇದ್ದರೂ ಸಭಾಪತಿ ಸ್ಥಾನಕ್ಕೆ ಬಿಜೆಪಿ ಧರ್ಮೇಗೌಡರನ್ನು ಕೂರಿಸಿತ್ತು.
ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಸದಸ್ಯರು ಸಭಾಪತಿ ಸ್ಥಾನದಿಂದ ಧರ್ಮೇಗೌಡರನ್ನು ಕೆಳಗಿಸಲು ಮುಂದಾಗಿ ದೊಡ್ಡ ಹೈಡ್ರಾಮವೇ ನಡೆಯಿತು.
ಸಭಾಪತಿ ಕುರ್ಚಿಗಾಗಿ ಫೈಟ್ ತಾರಕ್ಕೇರುತ್ತಿರುದ್ದಂತೆ ಮತ್ತೊಮ್ಮೆ ಅನಿರ್ಧಿಷ್ಟಾವಧಿಗೆ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.
ಯಾರದ್ದು ಸರಿ..? ಯಾರದ್ದು ತಪ್ಪು..?
ಸಾಮಾನ್ಯವಾಗಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಅರ್ಜಿ ಸಲ್ಲಿಸಿದರೇ ಕಲಾಪ ಆರಂಭಿಸುವುದು ಸಭಾಪತಿಗಳೇ ಆಗಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಹೀಗಾಗಿ ಕಲಾಪ ಮುಂದುವರೆಸುವಂತೆ ಉಪಸಭಾಪತಿಗಳನ್ನು ಕರೆದು ಸ್ಪೀಕರ್ ಸ್ಥಾನ ಅಲಂಕರಿಸುವಂತೆ ಸಭಾಪತಿಗಳು ಸೂಚಿಸಲಾಗುತ್ತದೆ. ಆನಂತರ ಉಪಸಭಾಪತಿಗಳು ಕಲಾಪವನ್ನು ಮುನ್ನಡೆಸುವುದು ನಿಯಮ. ಆದ್ರೆ ಇಂದು ಆಗಿದ್ದೇ ಬೇರೆ ವಿಧಾನಪರಿಷತ್ ಕಲಾಪ ಆರಂಭಕ್ಕೂ ಮುನ್ನ ಬೆಲ್ ಹಾಕಲಾಗಿತ್ತು.
ಸದನ ಆರಂಭವಾಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಪಕ್ಷಗಳ ಸದಸ್ಯರು ಬಂದು ತಮ್ಮ ಆಸನಗಳಲ್ಲಿ ಕುಳಿತಿದ್ದರು. ಉಪಸಭಾಪತಿ ಧರ್ಮೇಗೌಡ ಕೂಡ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಆದರೆ, ಬೆಲ್ ನಿಲ್ಲುವ ಮೊದಲೇ, ಮಾರ್ಷಲ್‍ಗಳು ಬಂದು ಸಭಾಪತಿಗಳು ಬರುತ್ತಾರೆಂದು ಹೇಳುವ ಮೊದಲೇ ಬಿಜೆಪಿ ಸದಸ್ಯರು ಸಭಾಪತಿ ಬರುವ ಬಾಗಿಲು ಬಂದ್ ಮಾಡಿ, ಸಭಾಪತಿ ಸ್ಥಾನಕ್ಕೆ ಉಪಸಭಾಪತಿ ಧರ್ಮೇಗೌಡರನ್ನು ತಂದು ಕೂರಿಸಿದರು. ಜತೆಗೆ ಸಭಾಪತಿ ಕೊಠಡಿಯಿಂದ ಪ್ರತಾಪ್ ಚಂದ್ರ ಶೆಟ್ಟಿ ಸದನ ಪ್ರವೇಶಿಸದಂತೆಯೂ ಬಿಜೆಪಿ ಸದಸ್ಯರು ಬಾಗಿಲು ಬಂದ್ ಮಾಡಿ ತಡೆದಿದ್ದರು. ಇಲ್ಲಿ ಬೆಲ್ ಹೊಡೆಯುವ ಸಮಯದಲ್ಲಿ ಉಪ ಸಭಾಪತಿ ಧರ್ಮೇಗೌಡ ಪೀಠಕ್ಕೆ ಬಂದ ಕುಳಿತದ್ದು ನಿಯಮವಲ್ಲ, ಇದು ಉಪಸಭಾಪತಿ ಮಾಡಿದ ತಪ್ಪು..
ಇದನ್ನೂ ಓದಿ : ವಿಧಾನ ಪರಿಷತ್ ನಲ್ಲಿ ಗದ್ದಲ : ತನಿಖೆಗೆ ತೇಜಸ್ವಿನಿ ಗೌಡ ಆಗ್ರಹ
ಬಿಜೆಪಿ ಸದಸ್ಯರು ಸಭಾಪತಿ ಬರುವ ಬಾಗಿಲನ್ನು ಮುಚ್ಚಿದ್ದರು. ಇದು ನಿಯಮಬಾಹಿರವಾಗಿದೆ.
ಇನ್ನು ಮುಚ್ಚಿದ ಬಾಗಿಲನ್ನು ತೆರೆಯುವ ಮತ್ತು ಮುಚ್ಚುವ ಕೆಲಸವನ್ನು ಮಾರ್ಷಲ್ ಗಳು ಮಾಡಬೇಕು. ಆದ್ರೆ ಬಾಗಿಲು ಮುಚ್ಚಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದು ಕೂಡ ತಪ್ಪು.
ಸಭಾಪತಿಗಳ ಸೂಚನೆಗೂ ಮುನ್ನ ಪೀಠದ ಮೇಲೆ ಕುಳಿತ ಉಪಸಭಾಪತಿಯನ್ನು ಎಬ್ಬಿಸುವ ಅಧಿಕಾರ ಮಾರ್ಷಲ್ ಗಳಿಗೆ ಮಾತ್ರ ಇದೆ. ಮಾರ್ಷಲ್ ಗಳು ಸಭಾಪತಿಯ ಸೂಚನೆ ಮೇರೆಗೆ ಇದನ್ನ ಮಾಡಬೇಕು. ಆದ್ರೆ ಕಾಂಗ್ರೆಸ್ ನ ಸದಸ್ಯರು ಯಾವುದೇ ಅನುಮತಿ ಸೂಚನೆ ಇಲ್ಲದೇ ಪೀಠದ ಮೇಲಿದ್ದ ಉಪಸಭಾಪತಿಗಳನ್ನು ಎಳೆದಾಡಿದ್ದು ನಿಯಮ ಬಾಹಿರವಾಗಿದೆ.
ಉಪಸಭಾಪತಿಗಳನ್ನು ಎಳೆದಾಡಿದ್ದೂ ಅಲ್ಲದೇ ಪೀಠದಿಂದ ಅವರನ್ನು ಎಬ್ಬಿಸಿ ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿದ ಕಾಂಗ್ರೆಸ್ ಸದಸ್ಯರ ನಡೆಯೂ ತಪ್ಪು.
ಇನ್ನ ಅತೀ ಮುಖ್ಯವಾಗಿ ಸಭಾಪತಿಗಳ ಪೀಠಕ್ಕೆ ತನ್ನದೇಯಾದ ಘನತೆ, ಗೌರವ, ಇತಿಹಾಸ ಇದೆ. ಅಂತಹ ಪೀಠದ ಮುಂದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ನಡೆದುಕೊಂಡ ರೀತಿ ಪೀಠಕ್ಕೆ ಮಾಡಿದ ಅವಮಾನ ಎಂಬ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









