ಕೇವಲ ಇಎಂಐ ಮಾತ್ರವಲ್ಲ, ಕ್ರೆಡಿಟ್ ಕಾರ್ಡ್ ಬಾಕಿ ಮರುಪಾವತಿಯನ್ನು 3 ತಿಂಗಳವರೆಗೆ ಮುಂದೂಡಬಹುದು ಎಂದು ಆರ್.ಬಿ.ಐ ಸ್ಪಷ್ಟೀಕರಣ ನೀಡಿದೆ.
ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಟರ್ಮ್ ಸಾಲಗಳ ಮೇಲಿನ ಎಲ್ಲಾ ಕಂತುಗಳನ್ನು ಪಾವತಿಸಲು ಮೂರು ತಿಂಗಳ ಅನುಮತಿ ನೀಡುವಂತೆ ಸಾಲ ನೀಡುವ ಸಂಸ್ಥೆಗಳಿಗೆ ಸೂಚಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಮಾರ್ಚ್ 1, 2020 ರಿಂದ ಬಾಕಿ ಇರುವ ಎಲ್ಲಾ ಅವಧಿಯ ಸಾಲಗಳ ಕಂತುಗಳನ್ನು ಪಾವತಿಸಲು ಮೂರು ತಿಂಗಳ ಅನುಮತಿ ನೀಡಲು ಎಲ್ಲಾ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಆರ್‌ಬಿಐ ಶುಕ್ರವಾರ (ಮಾರ್ಚ್ 27) ಪ್ರಕಟಿಸಿದೆ. ಆದರೆ ಸಾಲ ಪಾವತಿಗಳು ಮಾರ್ಚ್ 1 2020 ಮತ್ತು ಮೇ 30, 2020ರ ನಡುವಿನ ಅವಧಿಗೆ ಸಂಬಂಧಿಸಿರಬೇಕು ಎಂದು ಹೇಳಿದೆ.
ಸಾಮಾನ್ಯವಾಗಿ, ಸಾಲವನ್ನು ವಿತರಿಸಿದ ನಂತರ ಮರುಪಾವತಿ ಪ್ರಾರಂಭವಾಗುತ್ತದೆ ಮತ್ತು ಪ್ರತಿ ತಿಂಗಳು ಪಾವತಿಗಳನ್ನು ಮಾಡಬೇಕಾಗುತ್ತದೆ. ಆದಾಗ್ಯೂ, ಜಾಗತಿಕ ಸಾಂಕ್ರಾಮಿಕ ಕೊರೋನ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಮತ್ತು ಅದರ ಹರಡುವಿಕೆಯನ್ನು ನಿಯಂತ್ರಿಸಲು ವಿಧಿಸಲಾದ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಒಂದು ಬಾರಿ ವಿನಾಯಿತಿ ನೀಡಿದೆ.
ಈ ನಿರ್ಧಾರವು ಎಲ್ಲಾ ಪ್ರಾದೇಶಿಕ, ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಹೌಸಿಂಗ್ ಫೈನಾನ್ಸ್ ಕಂಪನಿಗಳು ಸೇರಿದಂತೆ ಎನ್‌ಬಿಎಫ್‌ಸಿಗಳನ್ನು ಒಳಗೊಂಡಿರುತ್ತದೆ, ಆದರೆ ಗ್ರಾಹಕರಿಗೆ ಲಾಭವನ್ನು ತಲುಪಿಸುವ ಅಂತಿಮ ನಿರ್ಧಾರವು ಬ್ಯಾಂಕ್ ಗಳ ಮಂಡಳಿಯ ಅನುಮೋದನೆಗೆ ಬಿಟ್ಟಿದೆ.