ಮೆಲ್ಬರ್ನ್ ನಲ್ಲಿ ಟೀಮ್ ಇಂಡಿಯಾ ಬೌಲರ್ ಗಳ ಹಾರಾಟ.. ಆಸೀಸ್ ಬ್ಯಾಟ್ಸ್ ಮೆನ್ ಗಳ ಪರದಾಟ..!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಐತಿಹಾಸಿಕ ಪಂದ್ಯವಾಗಿದೆ. ಉಭಯ ತಂಡಗಳ ನಡುವಿನ ನೂರನೇ ಟೆಸ್ಟ್ ಪಂದ್ಯಕ್ಕೆ ಮೆಲ್ಬರ್ನ್ ಕ್ರಿಕೆಟ್ ಅಂಗಣ ಸಾಕ್ಷಿಯಾಗಿದೆ.
ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಆಸ್ಟ್ರೇಲಿಯನ್ನರ ಗೇಮ್ ಪ್ಲಾನ್ ಅನ್ನು ಟೀಮ್ ಇಂಡಿಯಾ ಬೌಲರ್ ಗಳು ಆರಂಭದಲ್ಲೇ ಬುಡಮೇಲು ಮಾಡಿದ್ರು.
ಆರಂಭಿಕ ಜೋಯ್ ಬನ್ರ್ಸ್ (0) ಅವರನ್ನು ಜಸ್ಪ್ರಿತ್ ಬೂಮ್ರಾ ಪೆವಿಲಿಯನ್ ಕಳುಹಿಸಿದ್ರೆ, ಅಪಾಯಕಾರಿಯಾಗುತ್ತಿದ್ದ ಮ್ಯಾಥ್ಯೂ ವಾಡೆ (30 ರನ್) ಅವರನ್ನು ಅಶ್ವಿನ್ ಬಲಿ ಪಡೆದ್ರು.
ಆಸ್ಟ್ರೇಲಿಯಾದ ರನ್ ಮೇಷಿನ್ ಸ್ಟೀವನ್ ಸ್ಮಿತ್ ಶೂನ್ಯ ಸುತ್ತಿದ್ರು. ಅಶ್ವಿನ್ ಬೀಸಿದ ಬಲೆಗೆ ಬಿದ್ದ ಸ್ಟೀವನ್ ಸ್ಮಿತ್ ನಿರಾಸೆಯಿಂದಲೇ ಪೆವಿಲಿಯನ್ ದಾರಿ ಹಿಡಿದ್ರು.
ಈ ನಡುವೆ ಮಾರ್ನಸ್ ಲಾಬುಸ್ಚೆಂಚ್ ಮತ್ತು ಟ್ರಾವಿಡ್ ಹೆಡ್ ಟೀಮ್ ಇಂಡಿಯಾ ಬೌಲರ್ ಗಳನ್ನು ಸ್ವಲ್ಪ ಮಟ್ಟಿಗೆ ಕಾಡಲು ಶುರು ಮಾಡಿದ್ರು. ಈ ಹಂತದಲ್ಲಿ ಬೂಮ್ರ ಅವರು ಮತ್ತೊಮ್ಮೆ ಆಸ್ಟ್ರೇಲಿಯಾಗೆ ಆಘಾತ ನೀಡಿದ್ರು. 38 ರನ್ ಗಳಿಸಿದ್ದ ಟ್ರಾವಿಡ್ ಹೆಡ್ ಅವರು ಬೂಮ್ರಾಗೆ ವಿಕೆಟ್ ಒಪ್ಪಿಸಿದ್ರು.
ಹಾಗೇ ಆಕರ್ಷಕ 48 ರನ್ ದಾಖಲಿಸಿದ್ದ ಮಾರ್ನಸ್ ಲಾಬುಸ್ಚೆಂಜ್ ಅವರು ಮಹಮ್ಮದ್ ಸಿರಾಜ್ ಅವರಿಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಸಿರಾಜ್ ಚೊಚ್ಚಲ ಟೆಸ್ಟ್ ಪಂದ್ಯದ ಚೊಚ್ಚಲ ವಿಕೆಟ್ ಪಡೆದ ಸಂಭ್ರಮದಲ್ಲಿ ತೇಲಾಡಿದ್ರು. ಹಾಗೇ ಕ್ಯಾಮರೂನ್ ಗ್ರೀನ್ 12 ರನ್ ಗಳಿಸಿದ್ದಾಗ ಸಿರಾಜ್ ಅವರ ಎಲ್ ಬಿ ಬಲೆ ಬಿದ್ದರು.
ಇನ್ನು ನಾಯಕ ಟೀಮ್ ಪೇನ್ 13 ರನ್ ಸುಸ್ತಾದ್ರೆ, ಏಳು ರನ್ ಗಳಿಸಿದ್ದ ಮಿಟ್ಚೆಲ್ ಸ್ಟಾರ್ಕ್ ಬೂಮ್ರಾಗೆ ವಿಕೆಟ್ ಒಪ್ಪಿಸಿದ್ರು.
ದಿನದಾಟದ ಕೊನೆಯಲ್ಲಿ ನಥಾನ್ ಲಿಯಾನ್ ಅವರು 17 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ 20 ರನ್ ಸಿಡಿಸಿದ್ರು. ಆದ್ರೆ ನಥಾನ್ ಆರ್ಭಟಕ್ಕೆ ಬೂಮ್ರಾ ಅವರು ಬ್ರೇಕ್ ಹಾಕಿದ್ರು. ಅಂತಿಮವಾಗಿ ಪ್ಯಾಟ್ ಕಮಿನ್ಸ್ 9 ರನ್ ಗಳಿಸಿ ರವೀಂದ್ರ ಜಡೇಜಾಗೆ ಬಲಿಯಾದ್ರು. ಜೋಶ್ ಹಜ್ಲೆವುಡ್ ಅಜೇಯ ಏಳು ರನ್ ಗಳಿಸಿದ್ರು.
ಪರಿಣಾಮ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ ನಲ್ಲಿ 195 ರನ್ ಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಟೀಮ್ ಇಂಡಿಯಾ ಪರ ಜಸ್ಪ್ರಿತ್ ಬೂಮ್ರಾ ನಾಲ್ಕು ವಿಕೆಟ್ ಉರುಳಿಸಿದ್ರು. ಅಶ್ವಿನ್ ಮೂರು ವಿಕೆಟ್ ಪಡೆದ್ರೆ, ಮಹಮ್ಮದ್ ಸಿರಾಜ್ ಎರಡು ವಿಕೆಟ್ ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದ್ರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶುಬ್ಮನ್ ಗಿಲ್ ಮತ್ತು ಮಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ರು.
ಹಂಗಾಮಿ ನಾಯಕನಾಗಿರುವ ರಹಾನ್ ತಂಡವನ್ನು ಶಿಸ್ತುಬದ್ಧವಾಗಿ ಮುನ್ನಡೆಸಿದ್ರು. ಆರ್. ಅಶ್ವಿನ್ ಅನುಭವ, ಬೂಮ್ರಾ ಅವರ ಮಾರಕ ದಾಳಿ ಹಾಗೂ ಸಿರಾಜ್ ಅವರ ಹುರುಪು ಟೀಮ್ ಇಂಡಿಯಾಗೆ ವರದಾನವಾಗಿ ಪರಿಣಮಿಸಿತ್ತು. ಆದ್ರೆ ವಿಕೆಟ್ ಕೀಪರ್ ರಿಷಬ್ ಪಂತ್ ಪ್ರದರ್ಶನ ಮಾತ್ರ ನೀರಸವಾಗಿತ್ತು. ಶುಬ್ಮನ್ ಗಿಲ್ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಕ್ಯಾಚ್ ಪಡೆದು ಮಿಂಚು ಹರಿಸಿದ್ರು. ಹಾಗೇ ಡಿಆರ್‍ಎಸ್ ನಿರ್ಣಯವನ್ನು ತೆಗೆದುಕೊಳ್ಳುವಾಗ ರಹಾನೆ ತಾಳ್ಮೆ ಗಮನ ಸೆಳೆಯುವಂತಿತ್ತು.








