ಸೆಲೆಬ್ರಿಟಿ ಎಮ್ ಎಸ್ ಧೋನಿ ಯಾಕೆ ರೈತನಾಗಿದ್ದು…!
ಆ ಬ್ರಹ್ಮ ಬರೆದ ಹಣೆಬರೆಹವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಹಣೆ ಬರೆಹದಲ್ಲಿ ಏನು ಬರೆದಿದೆಯೋ ಅದೇ ಆಗೋದು. ಆದ್ರೆ ನಂಬಿಕೆ ಮುಖ್ಯ. ಅದೃಷ್ಟ ಚೆನ್ನಾಗಿದ್ರೆ ಎಲ್ಲವೂ ಚೆನ್ನಾಗಿರುತ್ತೆ.. ಹಾಗಂತ ನಂಬಿ ಬದುಕುತ್ತಿರುವವರು ಮಹೇಂದ್ರ ಸಿಂಗ್ ಧೋನಿ.
ಹಾಗೇ ನೋಡಿದ್ರೆ, ಧೋನಿಯ ಬದುಕಿನಲ್ಲಿ ನಡೆದಿರುವುದು ಎಲ್ಲವೂ ಆಕಸ್ಮಿಕ. ತಾನು ಅಂದುಕೊಂಡಿದ್ದು ಏನೋ ಆಗಿದ್ದೂ ಇನ್ನೇನೋ.. ಅದೊಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ ಅಂಥರಲ್ಲ ಹಾಗೇ.. ಯಾಕಂದ್ರೆ ಧೋನಿಯ ಬದುಕಿನಲ್ಲಿ ನಡೆದಿರುವ ಘಟನೆಗಳೇ ಇದಕ್ಕೆಲ್ಲಾ ನಿದರ್ಶನ.
ಫುಟ್ ಬಾಲ್ ಗೋಲ್ ಕೀಪರ್ ಆಗಿದ್ದ ಧೋನಿ ಆಗಿದ್ದು ವಿಕೆಟ್ ಕೀಪರ್. ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ ಆಗಿದ್ದು ವಿಶ್ವದ ಶ್ರೇಷ್ಠ ಕ್ರಿಕೆಟರ್. ಟೀಮ್ ಇಂಡಿಯಾಗೆ ಆಡಬೇಕು ಅಂತ ಆಸೆ ಇದ್ರೂ ಆಡುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ಒಬ್ಬ ಸಾಮಾನ್ಯ ಹೊಡಿಬಡಿ ಆಟಗಾರ ಕಮ್ ವಿಕೆಟ್ ಕೀಪರ್ ಆಗಿ ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ದ ಧೋನಿ ನಂತರ ನಡೆದಿರುವುದೆಲ್ಲಾ ಇತಿಹಾಸ.. ಎರಡು ವಿಶ್ವಕಪ್ ಕಿರೀಟ.. ನಂಬರ್ ವನ್ ಟೆಸ್ಟ್ ತಂಡದ ನಾಯಕ, ಅದ್ಭುತ ನಾಯಕ, ಅಪ್ರತಿಮ ವಿಕೆಟ್ ಕೀಪರ್, ಗೇಮ್ ಚೇಂಜರ್.. ಕ್ರಿಕೆಟ್ ಗ್ಲ್ಯಾಂಬ್ಲರ್ ಹೀಗೆ ಧೋನಿ ನಡೆದು ಬಂದ ಹಾದಿ ಈಗ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಅಧ್ಯಾಯಗಳಾಗಿ ರೂಪುಗೊಂಡಿವೆ.
ಮುಖ್ಯವಾಗಿ ಧೋನಿಯಲ್ಲಿ ಸ್ವಂತಿಕೆ ಇತ್ತು. ನಂಬಿಕೆ ಇತ್ತು. ಬದ್ಧತೆ ಇತ್ತು. ಅದಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆ ಮತ್ತು ದೂರದೃಷ್ಟಿ ಇತ್ತು. ಭೂತಕಾಲ, ವರ್ತಮಾನ ಮತ್ತು ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಧೋನಿಗೆ ಚೆನ್ನಾಗಿ ಅರಿವಿತ್ತು. ಹಾಗಾಗಿ ಎಮ್ ಎಸ್ ಡಿ ಅಥವಾ ಧೋನಿ ಅನ್ನೋ ಹೆಸರು ಬ್ರಾಂಡ್ ಆಗುತ್ತಿದೆ.
ನಿಜ, ಧೋನಿ ಅನ್ನೋದು ಬ್ರ್ಯಾಂಡ್ ಎಂಬುದು ಧೋನಿಗೆ ಗೊತ್ತಿಲ್ಲದ ವಿಚಾರವೇನು ಅಲ್ಲ. ಕ್ರಿಕೆಟಿಗನಾಗಿ, ಸೈನಿಕನಾಗಿ ಧೋನಿ ಸಾಕಷ್ಟು ಹೆಸರು ಮಾಡಿದ್ದರು. ಆದ್ರೆ ಇವೆಲ್ಲಾ ಎಷ್ಟು ದಿನ..? ತಾನು ಮೈದಾನದಲ್ಲಿ ಇರುವಷ್ಟು ದಿನ ಧೋನಿ ಅನ್ನೋ ಹೆಸರು ಪ್ರಜ್ವಲಿಸುತ್ತಿರುತ್ತೆ. ಆಮೇಲೆ ಧೋನಿ ಒಬ್ಬ ಮಾಮೂಲಿ ಸೆಲೆಬ್ರಿಟಿಯಷ್ಟೇ.. ಹೆಚ್ಚು ಅಂದ್ರೆ ವೀಕ್ಷಕ ವಿವರಣೆಕಾರ ಅಥವಾ ಕೋಚ್.. ಅಥವಾ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದು ಉನ್ನತ ಹುದ್ದೆ.. ಹಾಗಂತ ಇದು ಶಾಶ್ವತವೇನೂ ಅಲ್ಲ. ಯಾವಾಗ ಬೇಕಾದ್ರೂ ಪಟ್ಟ ಅಧಿಕಾರದಿಂದ ಕೆಳಗಿಳಿಯಬಹುದು ಎಂಬ ವಿಚಾರವೂ ಧೋನಿಗೆ ಗೊತ್ತಿತ್ತು.
ಬಹುಶಃ ಇದೇ ಕಾರಣದಿಂದ ಧೋನಿ ಭಿನ್ನವಾಗಿಯೇ ಯೋಚಿಸಿದ್ದಾರೆ. ನೇಮ್, ಫೇಮ್, ಯಶಸ್ಸಿನ ಉತ್ತುಂಗದಲ್ಲಿದ್ದ ಧೋನಿ ತನ್ನ ಕೃಷಿಕನಾಗಿ ಹೊಸ ಬದುಕನ್ನು ರೂಪಿಸಿಕೊಂಡ್ರು. ಅದಕ್ಕೆ ವರದಾನವಾಗಿದ್ದು ಕೋವಿಡ್ ಅನ್ನೋ ಮಹಾ ಮಾರಿ.
2019ರ ವಿಶ್ವಕಪ್ ನಂತರ ಧೋನಿಗೂ ಅನ್ನಿಸಿದ್ದು ತಾನು ಇನ್ನು ಮುಂದೆ ಟೀಮ್ ಇಂಡಿಯಾದಲ್ಲಿ ಆಡಲು ಸಾಧ್ಯವಿಲ್ಲ ಅಂತ. ಹೆಚ್ಚು ಅಂದ್ರೆ ಎರಡು ಮೂರು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಬಹುದು. ಆನಂತರ ಏನು ಮಾಡಬೇಕು ಅಂತ ಯೋಚನೆ ಮಾಡುತ್ತಿರುವಾಗಲೇ ಅವರ ಮುಂದಿದ್ದ ಆಯ್ಕೆ ಕೃಷಿಕ..
ಒಬ್ಬ ಕ್ರಿಕೆಟಿಗನಾಗಿ, ಧೋನಿ ಐಶಾರಾಮಿ ಜೀವನವನ್ನು ಸಾಗಿಸುತ್ತಿದ್ದಾರೆ. ರಾಂಚಿಯ ಫಾರ್ಮ್ ಹೌಸ್ ನಲ್ಲಿ ತನ್ನ ಕುಟುಂಬದ ಜೊತೆ ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಹವ್ಯಾಸಕ್ಕೆ ಕಾರು, ಬೈಕ್‍ಗಳಲ್ಲಿ ದೂರದ ಪ್ರಯಾಣ ಮಾಡುತ್ತಾರೆ. ಆದ್ರೆ ತಾನೊಬ್ಬ ಮಾದರಿ ವ್ಯಕ್ತಿಯಾಗಬೇಕು ಅನ್ನೋದು ಧೋನಿಯ ಮಹದಾಸೆಯಾಗಿತ್ತು.
ಕ್ರಿಕೆಟ್ ನಲ್ಲಿ ಬಂದ ಹಣದದಲ್ಲೇ ಧೋನಿ ಎಕರೆಗಟ್ಟಲೇ ಜಮೀನು ಖರೀದಿ ಮಾಡಿದ್ದರು. ಕೋವಿಡ್ ಲಾಕ್ ಡೌನ್ ಟೈಮ್ ನಲ್ಲಿ ಕ್ರಿಕೆಟ್ ಬಿಟ್ಟು ರೈತನಾಗಿ ಕೆಲಸ ಮಾಡಿದ್ದರು. ತನ್ನದೇ ತೋಟವನ್ನು ಬೆಳೆಸಿದ್ರು. ಸಾವಯವ ರಸಗೊಬ್ಬರವನ್ನು ಉತ್ಪನ್ನ ಮಾಡಿದ್ರು. ಸಾವಯವ ಕೃಷಿಯ ಮೂಲಕ ಮಾದರಿ ರೈತನಾಗುತ್ತಿದ್ದಾರೆ.
ಇದೀಗ ತನ್ನ ಭೂಮಿಯಲ್ಲಿ ಬೆಳೆದಿದ್ದ ಸ್ಟ್ರಾಬರಿ, ಟೊಮೋಟೊ ಮೊದಲಾದ ಕೃಷಿ ಪದಾರ್ಥಗಳನ್ನು ಮಾರುಕಟ್ಟೆಗೆ ವಿಸ್ತರಿಸಿದ್ದಾರೆ. ಧೋನಿ ಅನ್ನೋ ಬ್ರ್ಯಾಂಡ್ ಮೂಲಕ ತನ್ನ ತೋಟದಲ್ಲಿ ಬೆಳೆದಂತಹ ಪದಾರ್ಥಗಳನ್ನು ಮಾರಾಟ ಮಾಡಿ ಯಶಸ್ವಿ ಹಾಗೂ ಮಾದರಿ ರೈತನಾಗುತ್ತಿದ್ದಾರೆ.
ಅಂದ ಹಾಗೇ ಧೋನಿಯ ಕೃಷಿ ಕೂಡ ವೈಜ್ಞಾನಿಕ ಮಾದರಿಯಲ್ಲಿದೆ. ಅದಕ್ಕಾಗಿ ಬಂಡವಾಳ ಹಾಕಿದ್ದಾರೆ. ತನ್ನದೇ ಆದಂತಹ ತಂಡವನ್ನು ಕಟ್ಟಿಕೊಂಡಿದ್ದಾರೆ. ಆ ಮೂಲಕ ಕೃಷಿಯಲ್ಲೂ ಯಶ ಸಾಧಿಸಬಹುದು ಅನ್ನೋದನ್ನು ತೋರಿಸಿಕೊಡುತ್ತಿದ್ದಾರೆ. ಕೋವಿಡ್, ಲಾಕ್ ಡೌನ್ ಟೈಮ್ ನಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡವರನ್ನು ನೋಡಿದ್ದೇವೆ. ಅದೇ ರೀತಿ ಧೋನಿ ಕೂಡ.








