ಕೊರೋನ ಕರಿಛಾಯೆ ಇಡೀ ಜಗತ್ತನ್ನೇ ಆವರಿಸಿದ್ದು, ಇದಕ್ಕೆ ನಮ್ಮ ದೇಶ ಕೂಡ ಹೊರತಾಗಿಲ್ಲ. ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಜಾರಿಯಲ್ಲಿದ್ದರೂ, ದಿನನಿತ್ಯ ಕೊರೊನಾ ಸೋಂಕಿತರ ಸರಪಣಿ ಬೆಳೆಯುತ್ತಾ ಸಾಗುತ್ತಿದೆ. ಸಾರ್ವಜನಿಕರನ್ನು ಗುಂಪು ಸೇರಬೇಡಿ, ಓಡಾಟವನ್ನು ತಪ್ಪಿಸಿ ಎಂದು ಅದೆಷ್ಟೋ ಮನವಿ ಮಾಡಿದರೂ ಜನರು ಹೊರಗೆ ಅಡ್ಡಾದಿಡ್ಡಿ ತಿರುಗುತ್ತಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರೊಂದಿಗೆ ದೇಶದ ಸುಭದ್ರತೆಗೆ ಹೆಣಗಾಡುತ್ತಿರುವ ವರ್ಗ ಪೊಲೀಸರದ್ದು. ಹಗಲು ರಾತ್ರಿಯೆನ್ನದೆ, ಬಿಸಿಲು ಮಳೆ ಎನ್ನದೆ, ರಸ್ತೆ ಬದಿಯಲ್ಲೇ ತಿನ್ನುತ್ತಾ, ಯುದ್ಧದೋಪಾದಿಯಲ್ಲಿ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿರುವ ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಮನೆಯೊಳಗೆ ಇರಿ, ಹೊರಗೆ ಬರಬೇಡಿ ಎಂಬ ಬೇಡಿಕೆ ಇಡುವ ಪೊಲೀಸರು ತಮ್ಮ ಜೀವದ ಭೀತಿಯನ್ನು ತ್ಯಜಿಸಿ ಬೀದಿಗಿಳಿದಿದ್ದಾರೆ. ವಿನಯದಿಂದ ಸಹಕರಿಸುವಂತೆ ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳದೆ ರೋಗಾಣುವನ್ನು ಹಾಸ್ಯ ಮಾಡುತ್ತಾ ಟಿಕ್-ಟಾಕ್ ನಲ್ಲಿ, ವೀಡಿಯೋಗಳಲ್ಲಿ ಕೆಲವು ಹೊಣೆಗೇಡಿ ಜನರು ತಮ್ಮ ಎಡಬಿಡಂಗಿತನವನ್ನು ಪ್ರದರ್ಶಿಸುತ್ತಿದ್ದಾರೆ.
ತಮ್ಮ ಎಚ್ಚರಿಕೆಗೂ ಕಿವಿಗೊಡದ ಜನರಿಗೆ ವಿವಿಧ ರೀತಿಯಲ್ಲಿ ಜವಾಬ್ದಾರಿ ಹುಟ್ಟಿಸುವ ಕಾರ್ಯದಲ್ಲಿ, ಕೊರೊನಾ ಸೋಂಕಿನ ಬಗ್ಗೆ ತಿಳಿ ಹೇಳುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಕೊರೋನಾ ಮುಖವಾಡ ತೊಟ್ಟು, ಹಾಡು ಹೇಳಿ ಜನರಲ್ಲಿ ಜಾಗೃತಿ ಮೂಡಿಸುವುದನ್ನು ನೋಡಿದ್ದೇವೆ.
ಮತಿಗೇಡಿಗಳಂತೆ ವರ್ತಿಸುವ ಜನರ ನಡುವೆ, ತಮ್ಮ ನೆಮ್ಮದಿ, ಸಂಸಾರವನ್ನು ದೂರವಿಟ್ಟು ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಇವರೆಲ್ಲರೂ ತಾನುರಿದು ಜಗಕ್ಕೆ ಬೆಳಕನ್ನೀಯುವ ದೀಪಗಳು. ಜಗತ್ತೇ ಎದುರಿಸುತ್ತಿರುವ ಇಂತಹ ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಅನೇಕ ಪೊಲೀಸರು ತಮ್ಮ ಕರ್ತವ್ಯದ ಜೊತೆ ಮಾನವೀಯತೆಯ ಮೌಲ್ಯವನ್ನು ತೋರಿಸಿದ್ದಾರೆ. ಅವರಲ್ಲಿ ಒಬ್ಬರು ವಿವೇಕನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಫೀಕ್ ಕೆಲಿಂಜಾ.

ಲಾಕ್ ಡೌನ್ ಘೋಷಣೆಯಾದ ನಂತರ ದೆಹಲಿಯಲ್ಲಿದ್ದ ಉತ್ತರ ಪ್ರದೇಶದ ದಿನಗೂಲಿ ನೌಕರರು ನಡಿಗೆಯ ಮೂಲಕ ರಾತ್ರೋರಾತ್ರಿ ತಮ್ಮೂರಿಗೆ ಪಯಣ ಬೆಳೆಸಿ ಉಂಟಾದ ಗೊಂದಲದ ಬಗ್ಗೆಗಿನ ವರದಿಯನ್ನು ಪತ್ರಿಕೆಯಲ್ಲಿ ಓದಿದ ಇನ್ಸ್‌ಪೆಕ್ಟರ್ ರಫೀಕ್ ಕೆಲಿಂಜಾ ತನ್ನ ವ್ಯಾಪ್ತಿಯಡಿಯಲ್ಲಿ ಬರುವ ಹೊರರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ಚಿಂತಿತರಾದರು. ಕೂಡಲೇ ಕಾರ್ಯ ಪ್ರವೃತರಾದ ಅವರು ತಮ್ಮ ನಾಯಕತ್ವದಲ್ಲಿ ಲಾಕ್ ಡೌನ್ ನಿಂದ ಸರಿಯಾದ ಊಟವಿಲ್ಲದೆ ಕಷ್ಟಕ್ಕೆ ಒಳಗಾಗಿದ್ದ ಸುಮಾರು 385 ವಲಸೆ ಕುಟುಂಬಗಳನ್ನು ಗುರುತಿಸಿದರು. ತನ್ನ ಒತ್ತಡದ ಕೆಲಸದ ನಡುವೆಯೂ ಹತ್ತಿರದ ಅನೇಕ ದಾನಿಗಳ, ಎನ್. ಜಿ.ಒಗಳ ಸಹಾಯ ಪಡೆದು ಹಸಿದ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲ, ತಮ್ಮ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಸೇರಿ, 500ಕ್ಕೂ ಹೆಚ್ಚಿನ ಬಡವರಿಗೆ, ಭಿಕ್ಷುಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.
ಈಗಾಗಲೇ ಕಾರ್ಮಿಕ ಸಚಿವರಿಗೆ ಮಾಹಿತಿ ನೀಡಿ ಸರಕಾರದ ಸಹಾಯ ಹಸ್ತಕ್ಕೆ ಕೈ ಜೋಡಿಸಿರುವ ಇವರ ಮನವಿಗೆ ಆದಷ್ಟು ಬೇಗ ಸರಕಾರ ಸ್ಪಂದಿಸಿ ಬಡ ಕೂಲಿ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.
ಇವರೆಲ್ಲರ ಸೇವೆಯನ್ನು ದಯವಿಟ್ಟು ಮನೆಯಲ್ಲಿಯೇ ಇದ್ದು ಎಲ್ಲರೂ ಕೊರೊನಾವನ್ನು ಒಟ್ಟುಗೂಡಿ ಹಿಮ್ಮೆಟ್ಟಿಸುವ ಮೂಲಕ ಗೌರವಿಸೋಣ. ಕೊರೊನಾ ವಿರುದ್ಧ ಕಾರ್ಯನಿರತರಾಗಿರುವ ವೈದ್ಯರು, ಪೊಲೀಸರು, ಸ್ವಚ್ಚತಾ ಕಾರ್ಮಿಕರು ಎಲ್ಲರೂ ಒಂದೇ ನಾಣ್ಯದ ಎರಡು ಮುಖಗಳು. ಒಮ್ಮೆ ನಾವೆಲ್ಲರೂ ನಮಗಾಗಿ ಜೀವವನ್ನು ಒತ್ತೆ ಇಟ್ಟು ಸೇವೆ ಸಲ್ಲಿಸುತ್ತಿರುವ ಅವರ ಸ್ಥಾನದಲ್ಲಿ ನಿಂತು ಯೋಚಿಸೋಣ. ಅವರ ಕುಟುಂಬ ಅವರ ಮನೆ ಅವರಿಗಾಗಿ ಮಿಡಿಯುತ್ತಾ ಇದೆ. ಅದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ, ಇಲಾಖೆಯ ಸೂಚನೆಗಳನ್ನು ಪಾಲಿಸುತ್ತಾ ಕೊರೊನಾ ವಿರುದ್ಧ ಜಯ ಸಾಧಿಸೋಣ.








