ಬೆಂಗಳೂರಿನಲ್ಲಿ ಯಶ್ ದಂಪತಿ ಭೇಟಿಯಾದ ಯುಜುವೇಂದ್ರ ಚಾಹಲ್ ದಂಪತಿ..!
ಸಿನಿ ಜಗತ್ತಿಗೂ ಕ್ರಿಕೆಟ್ ದುನಿಯಾಗಿರುವ ನಂಟು ಇಂದು ನಿನ್ನೆಯದಲ್ಲ. ಹಾಗೇ ಸಿನಿ ತಾರೆಯರು ಮತ್ತು ಕ್ರಿಕೆಟಿಗರು ಪರಸ್ಪರ ಭೇಟಿಯಾಗುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಆದ್ರೆ ಈ ಒಂದು ಭೇಟಿ ಮಾತ್ರ ತುಸು ಅಚ್ಚರಿಗೆ ಕಾರಣವಾಗುತ್ತಿದೆ.
ಹೌದು, ಟೀಮ್ ಇಂಡಿಯಾ ಆಟಗಾರ ಯುಜುವೇಂದ್ರ ಚಾಹಲ್ ದಂಪತಿ ಮತ್ತು ಸ್ಯಾಂಡಲ್ ವುಡ್ ನ ಯಶ್ ದಂಪತಿ ಪರಸ್ಪರ ಭೇಟಿಯಾಗಿರುವುದು ಒಂಥರ ಆಶ್ಚರ್ಯವೇ.
ಹಾಗಂತ ಇದಕ್ಕೆ ನಿಖರ ಕಾರಣಗಳು ಗೊತ್ತಿಲ್ಲ. ಸದ್ಯ ಯುಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನ ಶ್ರೀ ಅವರು ಬೆಂಗಳೂರಿನಲ್ಲಿದ್ದಾರೆ. ಅದು ಅಲ್ಲದೆ ಚಾಹಲ್ ಗೂ ಬೆಂಗಳೂರಿಗೂ ನಂಟಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿರುವ ಚಾಹಲ್ ಬೆಂಗಳೂರನ್ನು ಹೆಚ್ಚು ಪ್ರೀತಿಸ್ತಾರೆ.
ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ಭಾರತ ಮಾತ್ರವಲ್ಲ ವಿಶ್ವದ ಗಮನ ಕೂಡ ಸೆಳೆದಿದ್ದಾರೆ. ಚಾಹಲ್ ಕ್ರಿಕೆಟ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲ ತಾಣದಲ್ಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಚಾಹಲ್ ಪತ್ನಿ ಕೂಡ ಸಾಮಾಜಿಕ ಜಾಲ ತಾಣದಲ್ಲಿ ತನ್ನ ವಿಶಿಷ್ಟ ನೃತ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಸಾಕಷ್ಟು ನೇಮ್ ಫೇಮ್ ಅನ್ನು ಹೊಂದಿದ್ದಾರೆ. ಹೀಗಾಗಿ ಚಾಹಲ್ ಮತ್ತು ಯಶ್ ಕುಟುಂಬ ಸ್ನೇಹ ಪೂರ್ವಕವಾಗಿ ಭೇಟಿಯಾಗಿದ್ದಾರೆ. ಈ ಎರಡು ಕುಟುಂಬಗಳು ಭೇಟಿಯಾಗಿರುವುದಕ್ಕೆ ಸಾಕ್ಷಿಯಾಗಿ ಚಾಹಲ್ ತನ್ನ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಯಶ್ ಅವರು ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇನ್ನು ಚಾಹಲ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆಸ್ಟ್ರೇಲಿಯಾ ಸರಣಿಯ ನಂತರ ಚಾಹಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಆದ್ರೆ ಚಾಹಲ್ ಮತ್ತು ಧನ ಶ್ರೀ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಹೀಗಾಗಿ ಚಾಹಲ್ ದಂಪತಿ ಜಾಲಿ ಮೂಡ್ ನಲ್ಲಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಚಾಹಲ್ ಆಯ್ಕೆಯಾಗುವುದು ಬಹುತೇಕ ಖಚಿತ. ಆದಾದ ನಂತರ ಐಪಿಎಲ್ ಟೂರ್ನಿ ಆರಂಭವಾಗಲಿದೆ.







