ರಾಜ್ಯದಲ್ಲಿ ವೈರಲ್ ಜ್ವರದ ಪ್ರಕರಣಗಳ ಜೊತೆಗೆ ಮಕ್ಕಳಲ್ಲಿ ಕಾಲು-ಬಾಯಿ ಬೇನೆ (Hand, Foot and Mouth Disease – HFMD) ಸೋಂಕಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಈ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಜ್ವರದ ಜೊತೆಗೆ ಕೈ, ಕಾಲು ಹಾಗೂ ಬಾಯಿಯ ಭಾಗದಲ್ಲಿ ನೀರುಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳು ಹಾಗೂ ಮಕ್ಕಳ ಕ್ಲಿನಿಕ್ಗಳಿಗೆ ದಾಖಲಾಗುತ್ತಿರುವ ಮಕ್ಕಳಲ್ಲಿ ವೈರಲ್ ಜ್ವರದ ಪ್ರಮಾಣ ಹೆಚ್ಚಾಗಿದೆ. ಕೆಲವು ವೈದ್ಯರ ಪ್ರಕಾರ, ಚಿಕಿತ್ಸೆಗಾಗಿ ಬರುತ್ತಿರುವ ಮಕ್ಕಳಲ್ಲಿ ಸುಮಾರು 40% ಮಂದಿಯಲ್ಲಿ ವೈರಲ್ ಜ್ವರದ ಲಕ್ಷಣಗಳು ಕಂಡುಬರುತ್ತಿವೆ. ಇದರ ಜೊತೆಗೆ HFMD ಪ್ರಕರಣಗಳೂ ಹೆಚ್ಚುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಕೈ, ಕಾಲು, ಬಾಯಿಯಲ್ಲಿ ನೀರುಗುಳ್ಳೆಗಳು
HFMD ಸಾಮಾನ್ಯವಾಗಿ ಕಾಕ್ಸ್ಸಾಕಿ ವೈರಸ್ ಹಾಗೂ ಇತರ ಎಂಟೆರೋವೈರಸ್ಗಳಿಂದ ಉಂಟಾಗುವ ಸೋಂಕಾಗಿದೆ. ಸೋಂಕಿಗೆ ಒಳಗಾದ ಮಕ್ಕಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ನಂತರ ಕೈ, ಕಾಲು ಹಾಗೂ ಬಾಯಿಯ ಒಳಭಾಗದಲ್ಲಿ ಸಣ್ಣ ನೀರುಗುಳ್ಳೆಗಳು ಅಥವಾ ದದ್ದುಗಳು ಕಾಣಿಸಿಕೊಳ್ಳುತ್ತವೆ.
ಈ ಗುಳ್ಳೆಗಳಿಂದ ಉರಿ, ನೋವು ಹಾಗೂ ಕಿರಿಕಿರಿ ಉಂಟಾಗುವುದರಿಂದ ಮಕ್ಕಳು ತೊಂದರೆ ಅನುಭವಿಸಬಹುದು.
ಸೋಂಕು ಹರಡುವುದನ್ನು ತಡೆಯಲು ಎಚ್ಚರಿಕೆ ಅಗತ್ಯ
HFMD ಚಿಕ್ಕ ಮಕ್ಕಳಲ್ಲಿ ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ ಡೇಕೇರ್, ಪ್ಲೇಗ್ರೂಪ್, ಶಾಲೆಗಳು ಹಾಗೂ ಆಟದ ಸ್ಥಳಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಸೋಂಕಿತ ಮಗುವಿನ ಲಾಲಾರಸ, ಮೂಗಿನ ಸ್ರಾವ, ಗುಳ್ಳೆಗಳ ದ್ರವ ಹಾಗೂ ಮಲದ ಮೂಲಕವೂ ವೈರಸ್ ಹರಡಬಹುದು. ಹೀಗಾಗಿ ಮಕ್ಕಳ ಕೈಗಳನ್ನು ನಿಯಮಿತವಾಗಿ ತೊಳೆಯಿಸುವುದು, ಟವೆಲ್, ಪಾತ್ರೆ, ಆಟಿಕೆಗಳಂತಹ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳದಂತೆ ನೋಡಿಕೊಳ್ಳುವುದು ಮತ್ತು ಸೋಂಕಿನ ಲಕ್ಷಣಗಳಿರುವ ಮಕ್ಕಳನ್ನು ಇತರರಿಂದ ದೂರವಿಡುವುದು ಮುಖ್ಯ.
ದ್ರವಾಹಾರ, ಪೌಷ್ಟಿಕ ಆಹಾರ ಮುಖ್ಯ
ಸೋಂಕಿನ ಸಂದರ್ಭದಲ್ಲಿ ಜ್ವರ ಸಾಮಾನ್ಯವಾಗಿ 7ರಿಂದ 10 ದಿನಗಳವರೆಗೆ ಮುಂದುವರಿಯಬಹುದು. ಜ್ವರ ಕಡಿಮೆಯಾದ ಬಳಿಕವೂ ಕೆಲವು ಮಕ್ಕಳಲ್ಲಿ ದುರ್ಬಲತೆ ಕಂಡುಬರುವ ಸಾಧ್ಯತೆಯಿದೆ.
ಮಕ್ಕಳಿಗೆ ಸಾಕಷ್ಟು ನೀರು ಹಾಗೂ ದ್ರವಪದಾರ್ಥಗಳು, ಸಮತೋಲಿತ ಆಹಾರ ಮತ್ತು ಅಗತ್ಯ ಪೋಷಕಾಂಶಗಳನ್ನು ನೀಡುವುದು ಮುಖ್ಯ. ಮಗು ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದಿರುವುದು, ನಿರಂತರ ಜ್ವರ, ತೀವ್ರ ದುರ್ಬಲತೆ ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.








