ಕೊನೆಗೂ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ.. ಬಣ್ಣದ ಜಗತ್ತಿನ ಹಾಸ್ಯ ಚಕ್ರವರ್ತಿ ಬುಲೆಟ್ ಪ್ರಕಾಶ್ ಇಂದು ಬಾರದ ಲೋಕದತ್ತ ಪಯಣಿಸಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕೋಟ್ಯಾಂತರ ಮಂದಿಯ ಮನಗೆದ್ದಿದ್ದ ಬುಲೆಟ್ ಪ್ರಕಾಶ್, ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ.
44 ವರ್ಷ ವಯಸ್ಸಿನ ಬುಲೆಟ್ ಪ್ರಕಾಶ್ ಕಿಡ್ನಿ ವೈಫಲ್ಯ ಮತ್ತು ಸೋಂಕಿದ ಬಳಲುತ್ತಿದ್ದರು. ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದ್ರೆ ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ವಾರದ ಹಿಂದೆ ಫೋರ್ಟಿಸ್‌ಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞ ವೈದ್ಯರ ತಂಡ ಚಿಕಿತ್ಸೆಯನ್ನ ನೀಡುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸೇವೆ ಸಲ್ಲಿಸುವ ಮೂಲಕ ಕನ್ನಡಿಗರನ್ನು ನಕ್ಕು ನಲಿಸಿದ್ದ ಬುಲೆಟ್‌ನ ಸದ್ದು ಇನ್ನಿಲ್ಲವಾಗಿದೆ.
ಬುಲೆಟ್ ಪ್ರಕಾಶ್ ಜೀವನ
ಏಪ್ರಿಲ್ 2, 1976ರಂದು ಜನಿಸಿದ ಬುಲೆಟ್ ಪ್ರಕಾಶ್ ಬಣ್ಣದ ಜಗತ್ತಿನಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದರು. ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸ್ತಿದ್ದರಿಂದ
ಅವರನ್ನು ಬುಲೆಟ್ ಪ್ರಕಾಶ್ ಎಂದು ಕರೆಯಲಾಗುತ್ತಿತ್ತು. 1999ರಲ್ಲಿ ಎ.ಕೆ 47 ಸಿನಿಮಾದಿಂದ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ರು. 2002ರಲ್ಲಿ ಚಾಲೆಂಜಿ0ಗ್ ಸ್ಟಾರ್ ದರ್ಶನ್ ಅಭಿನಯದ ಧ್ರುವ ಸಿನಿಮಾದ ಮೂಲಕ ಹಾಸ್ಯ ನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ನಂತ್ರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ ಅವರು ಸಿನಿಪ್ರೇಕ್ಷಕರ ಹೃದಯ ಸಿಂಹಾಸನವೇರಿದ್ದರು. ಚಾಲೆಂಜಿಂಗ್ ದರ್ಶನ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಶಿವಣ್ಣ, ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ಬುಲೆಟ್ ಪ್ರಕಾಶ್ ಅಭಿನಯಿಸಿದ್ದಾರೆ. ಅದರಲ್ಲೂ ಕಲಾಸಿ ಪಾಳ್ಯ ಚಿತ್ರದಲ್ಲಿ ಸಾಧುಕೋಕಿಲ ಮತ್ತು ಪ್ರಕಾಶ್ ಅವರ ಜೋಡಿ ಕನ್ನಡಿಗರ ಮನ ಗೆದ್ದಿತ್ತು. ಇದುವರೆಗೆ 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ಸೂಂಬೆ ಅನ್ನೋ ತುಳು ಸಿನಿಮಾದಲ್ಲೂ ಅವರು ನಟಿಸಿದ್ದಾರೆ.
ರಾಜಕೀಯಕ್ಕೆ ಎಂಟ್ರಿ!
ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಬುಲೆಟ್ ಪ್ರಕಾಶ್ 2015ರಲ್ಲಿ ರಾಜಕೀಯವನ್ನು ಪ್ರವೇಶಿಸಿ, ಬಿಜೆಪಿ ಸೇರ್ಪಡೆಯಾಗಿದ್ರು.
ಕೊನೆಯುಸಿರು ಎಳೆಯೋದ್ರೊಳಗೆ ಮತ್ತೊಮ್ಮೆ ದರ್ಶನ್ ಜೊತೆ ನಟಿಸ್ಬೇಕು ಅನ್ನೋ ಆಸೆ ಹಂಚಿಕೊಂಡಿದ್ದ ಪ್ರಕಾಶ್, ಸದ್ಯ ಗಾಳಿಪಟ-2 ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದರು..
ಒಟ್ಟಾರೆ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಹೃದಯ ಗೆದ್ದಿದ್ದ ಬುಲೆಟ್ ಪ್ರಕಾಶ್ ಅವರು ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ..!








