ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ಇಂದು ಅವರ ನಿವಾಸಕ್ಕೆ ತರಲಾಯ್ತು.
ಕೊರೊನಾ ಲಾಕ್ ಡೌನ್ ಹಿನ್ನೆಲೆ ಚಿತ್ರರಂಗದವರಿಗೂ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಇಲ್ಲದಂತಾಗಿದೆ. ಆದ್ರೆ ದುನಿಯಾ ವಿಜಿ ಮಾತ್ರ ಪ್ರಕಾಶ್ ಅವರ ಮನೆಯಲ್ಲೆ ಇದ್ದು, ಅಂತಿಮ ದರ್ಶನದ ವ್ಯವಸ್ಥೆಯನ್ನು ನೋಡಕೊಳ್ಳುತ್ತಿದ್ದಾರೆ. ಅಲ್ಲದೆ ಯಾರು ಮನೆಯ ಹತ್ತಿರ ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಹೆಬ್ಬಾಳದ ಚಿತಾಗಾರದಲ್ಲಿ ಬುಲೆಟ್ ಪ್ರಕಾಶ್ ಅಂತ್ಯಸಂಸ್ಕಾರ ನಡೆಯಲಿದೆ. ಈಗಾಗಲೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಮಡಿವಾಳ ಸಂಪ್ರದಾಯದಂತೆ ಪ್ರಕಾಶ್ ಮೃತದೇಹವನ್ನು ಮಣ್ಣಲ್ಲಿ ಸಮಾಧಿ ಮಾಡಲು ಸಂಬಂಧಿಕರು ಸಿದ್ಧತೆ ನಡೆಸಿದ್ದಾರೆ.








