ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಆದೇಶ ಏಪ್ರಿಲ್ 15ರವರೆಗೆ ಜಾರಿಯಲ್ಲಿದೆ. ಸೋಂಕು ಇನ್ನೂ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಸಿದರು. ದೇಶದಲ್ಲಿ ಸೋಂಕು ಇನ್ನೂ ಹರಡುತ್ತಿದ್ದು, ತಹಬದಿಗೆ ಬರದ ಕಾರಣ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಮಣಿಪುರ, ಗೋವಾ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಸೇರಿದಂತೆ ಹಲವು ರಾಜ್ಯದ ಮುಖ್ಯಮಂತ್ರಿಗಳು ಏಪ್ರಿಲ್ 30 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಿ ಆದೇಶಿಸಿದ್ದಾರೆ. ಕರ್ನಾಟಕದಲ್ಲೂ ಲಾಕ್ ಡೌನ್ ಅವಧಿ ಅನಿವಾರ್ಯವಾಗಿದೆ ಎಂಬ ಸಲಹೆಯನ್ನು ಸರ್ಕಾರಕ್ಕೆ ವೈದ್ಯಕೀಯ ತಜ್ಞರು ನೀಡಿದ್ದಾರೆ.ವಿಪಕ್ಷ ನಾಯಕರ ಸಭೆಯಲ್ಲೂ ಲಾಕ್ ಡೌನ್ ಮುಂದುವರೆಸಲು ಸಹಮತ ವ್ಯಕ್ತವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಒಂದು ವೇಳೆ ಲಾಕ್ ಡೌನ್ ವಿಸ್ತರಿಸಲು ಸರ್ಕಾರ ನಿರ್ಣಯಿಸಿದರೆ, ಯಾರೂ ವಿರೋಧಿಸಬಾರದು. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ನಡುವೆ ಏಪ್ರಿಲ್ 11 ಶನಿವಾರದಂದು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವೀಡಿಯೋ ಸಂವಾದ ನಡೆಸಲಿದ್ದು, ಆಯಾ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ತೆರವು ಅಥವಾ ಮುಂದುವರಿಸುವ ಸಂಬಂಧ ಸ್ಪಷ್ಟ ನಿರ್ಧಾರ ತಿಳಿಸಲಿದ್ದಾರೆ.
ಈಗಾಗಲೇ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ್ದು, ಪ್ರಧಾನಿ ಜೊತೆಗಿನ ವೀಡಿಯೋ ಸಂವಾದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಲಾಕ್ ಡೌನ್ ಅನುಷ್ಠಾನ, ಆಹಾರ ಧಾನ್ಯ ಹಂಚಿಕೆ, ಹಾಲು ವಿತರಣೆ ಮತ್ತಿತರ ವಿಷಯಗಳ ಕುರಿತು ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಮೈಸೂರು, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡು ಏಪ್ರಿಲ್ 15ರ ಒಳಗೆ ನಿಯಂತ್ರಣ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಲಾಕ್ ಡೌನ್ ತೆರವು ಸಂಬಂಧ ತಜ್ಞರ ಸಮಿತಿ ಕೆಲವೊಂದು ಸಲಹೆಗಳನ್ನು ಸರ್ಕಾರಕ್ಕೆ ಸೂಚಿಸಿದೆ.
1. ಆಯಾ ಜಿಲ್ಲಾ ಪರಿಸ್ಥಿತಿಗೆ ಅನುಗುಣವಾಗಿ ಹಂತ-ಹಂತವಾಗಿ ಲಾಕ್ ಡೌನ್ ತೆರವು.
2. ಮುಂದಿನ ಆರು ತಿಂಗಳವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾದ ಅನಿವಾರ್ಯತೆ.
3. ಲಾಕ್ ಡೌನ್ ಸಡಿಲಿಸಿದ ನಂತರವೂ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕು.
4. ಸಾಮಾಜಿಕ ಅಂತರ ಕಟ್ಟು ನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು.
5. ಶಾಲೆ ಕಾಲೇಜುಗಳನ್ನು ಮೇ 31ರವರೆಗೆ ಮುಚ್ಚಬೇಕು ಮತ್ತು ಆನ್ ಲೈನ್ ತರಗತಿಗಳಿಗೆ ಉತ್ತೇಜನ ನೀಡಬೇಕು.
6. ಹವಾ ನಿಯಂತ್ರಣ ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು.
7. ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು.
8. ಐಟಿ, ಬಿಟಿ ಉದ್ಯಮಗಳು, ಅತ್ಯಾವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು ಶೇಕಡಾ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು.
9. ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ
10. ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯಕ್ಕೆ ಪ್ರಾರಂಭಿಸಬಾರದು.
11. ಏಪ್ರಿಲ್ 31ವರೆಗೆ ಹವಾನಿಯಂತ್ರಿತ ಬಸ್ / ಮೆಟ್ರೋ ಸೇವೆ ಬೇಡ
12. ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು
13. ಕೋವಿಡ್ ಪ್ರಕರಣಕ್ಕೆ ಚಿಕಿತ್ಸೆ ನೀಡುವ ವೈದ್ಯರು, ದಾದಿಯರು, ಇತರ ಅರೆ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಬೇಕು.








