ಮಂಗಳೂರು: ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದ್ದು, ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ದಂಧೆ ಜೋರಾಗಿ ನಡೆಯುತ್ತಿದೆ. ಮಂಗಳೂರಿನ ಮನೆಯೊಂದರಲ್ಲಿ ಈ ದಂಧೆ ನಡೆಯುತ್ತಿದ್ದ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 3.250 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 3 ಲೀಟರ್ ನಕಲಿ ಅನ್ನು ವಶಪಡಿಸಿಕೊಂಡಿದ್ದಾರೆ. ಹೋಂಡಾ ಆಕ್ಟಿವ್ ಸ್ಕೂಟರ್ ಜಪ್ತಿ ಮಾಡಿ ರೋಹಿತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಏಪ್ರಿಲ್ 6ರಂದು ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಪೊಲೀಸರು ಜಪ್ಪಿನಮೊಗರು ನ್ಯೂಪಡ್ಪು ಎಂಬಲ್ಲಿ ದಾಳಿ ನಡೆಸಿ 3.5 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ಭಟ್ಟಿ ಸಾರಾಯಿ ತಯಾರಿಕಾ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ರಿಚರ್ಡ್ ಡಿಸೋಜ ವಿರುದ್ಧ ಪ್ರಕರಣ ದಾಖಲಾಗಿದೆ.








