ಬೆಂಗಳೂರು: ಭಾರತದಲ್ಲಿ ಕೊರೊನಾ ಸೋಂಕು ತನ್ನ ಕಬಂದಬಾಹುಗಳನ್ನು ಕ್ಷಿಪ್ರ ಗತಿಯಲ್ಲಿ ಚಾಚುತ್ತಲೇ ಇದೆ. ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಬಡಜನರಿಗೆ ತೊಂದರೆ ಆಗಬಾರದೆಂದು ಹಲವು ಕ್ರಮಗಳನ್ನು ಹಾಗೂ ಕೆಲ ವಿನಾಯಿತಿಗಳನ್ನು ಘೋಷಿಸಿದೆ. ಆದ್ರೆ ಬಾಡಿಗೆ ಮನೆಯಲ್ಲಿರುವವರ ಬಗ್ಗೆ ಮಾತ್ರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮೂರು ತಿಂಗಳ ಬಾಡಿಗೆ ವಿನಾಯಿತಿ ಘೋಷಿಸಿ ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಅನೇಕ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಕೋವಿಡ್-19 ಸಂಕಟದ ಅವಧಿಗೆ ಬಾಡಿಗೆ ವಿನಾಯಿತಿಯನ್ನು ಘೋಷಿಸಿವೆ. ದೆಹಲಿಯ ಸರಕಾರ ಮೂರು ತಿಂಗಳ ಬಾಡಿಗೆಯನ್ನು ತಾನೇ ಕೊಡುವ ಯೋಜನೆ ಘೋಷಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ ಡಿಕೆ, ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುವ ಹಾಗೂ ಇಲ್ಲಿನ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಜನರ ಆರ್ಥಿಕ ಸ್ಥಿತಿ ನಾಜೂಕಾಗಿದೆ. ಇಂತಹ ಸಂದರ್ಭದಲ್ಲಿ ಮನೆ, ಪಿಜಿ, ಹಾಸ್ಟೆಲ್ ಮಾಲೀಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರತೆ ತೋರಲಿ. ಸರಕಾರ ಬಾಡಿಗೆ ವಿನಾಯಿತಿ ಘೋಷಿಸಿ ಜನಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.
ಆರ್ಥಿಕ ಚಟುವಟಿಕೆಯೇ ಸಮಗ್ರವಾಗಿ ಸ್ಥಗಿತಗೊಂಡ ಈ ದಿನಗಳಲ್ಲಿ ಎಂದಿನಂತೆ ಪ್ರತಿ ತಿಂಗಳು ಮನೆ ಬಾಡಿಗೆಯನ್ನು ಕೊಡಲೇಬೇಕು ಅಂತ ಮನೆ ಮಾಲೀಕರು ಪಟ್ಟು ಹಿಡಿದರೆ ಆರ್ಥಿಕ ಹೊರೆಯನ್ನು ತಾಳಲಾರದ ಬಾಡಿಗೆದಾರ ಇನ್ನೊಂದು ಮನೆ ಹುಡುಕಿಕೊಂಡು ಹೋಗುವ ಸ್ಥಿತಿಯೂ ಇಲ್ಲವಾದ್ದರಿಂದ, ಕೇಂದ್ರ ಸರಕಾರ ಈ ಕೂಡಲೇ ಬಾಡಿಗೆ ವಿನಾಯಿತಿ ಯೋಜನೆಯನ್ನು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.








