ನವದೆಹಲಿ: ಕೊರೊನಾ ಹೊಡೆತಕ್ಕೆ ದೇಶದ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದು, ದೇಶ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಹೆಲಿಕಾಪ್ಟರ್ ಮನಿ (ಹೆಲಿಕಾಪ್ಟರ್‌ನಲ್ಲಿ ಹಣ ಸುರಿಸುವುದು) ಕುರಿತು ಚರ್ಚೆಗಳು ಶುರುವಾಗಿವೆ.
ಈ ಬಗ್ಗೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಮಾತನಾಡಿದ್ದು, ಹೆಲಿಕಾಪ್ಟರ್ ಮನಿ ಕುರಿತು ಆರ್ ಬಿಐ ಚಿಂತನೆ ನಡೆಸುವುದು ಒಳಿತು ಎಂದು ಆಗ್ರಹಿಸಿದ್ದರು.
ಆದರೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಾ? ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಎಂಬುದನ್ನು ನೋಡುವ ಮೊದಲು ಹೆಲಿಕಾಪ್ಟರ್ ಮನಿ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ!
ಹೆಲಿಕಾಪ್ಟರ್ ಮನಿ ಎಂದರೇನು?
ಹೆಲಿಕಾಪ್ಟರ್ ಮನಿ ಎಂದರೆ ಹೆಲಿಕಾಪ್ಟರ್ ಗಳಿಂದ ನಿರ್ದಿಷ್ಟ ಮುಖಬೆಲೆಯ ನೋಟುಗಳ ಸುರಿಮಳೆ ಸುರಿಸುವುದು ಎಂದರ್ಥ. ಅಮೆರಿಕದ ಆರ್ಥಿಕ ತಜ್ಞ ಮಿಲ್ಟನ್ ಫ್ರೈಡ್ ಮ್ಯಾನ್ 1969ರಲ್ಲಿ ಇಂಥ ಪರಿಕಲ್ಪನೆಯನ್ನು ಪರಿಚಯಿಸಿದ್ದರು.
“ಯಾವುದೇ ರಾಷ್ಟ್ರದಲ್ಲಿ ಆರ್ಥಿಕತೆ ತನ್ನ ಸಾಮರ್ಥ್ಯಕ್ಕಿಂತ ಕನಿಷ್ಠ ಮಟ್ಟಕ್ಕೆ ಕುಸಿದಲ್ಲಿ, ಅದಕ್ಕೆ ಉತ್ತೇಜನ ನೀಡುವ ಜತೆಗೆ ಹಣದುಬ್ಬರ ಹೆಚ್ಚಿಸಿ, ಉತ್ಪಾದನೆ ಹೆಚ್ಚಳಕ್ಕೆ ಇಂಬು ನೀಡಲು ನಿರ್ದಿಷ್ಟ ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡುವುದನ್ನು ಹೆಲಿಕಾಪ್ಟರ್ ಮನಿ ಎಂದು ಕರೆಯಲಾಗುತ್ತದೆ.
ಹೀಗೆ ಮಾಡುವುದರಿಂದ, ಜನರ ಕೈಗೆ ಸುಲಭವಾಗಿ ಹಣ ಸಿಗುವಂತಾಗುತ್ತದೆ. ಅವರು ಆ ಹಣವನ್ನು ಖರ್ಚು ಮಾಡಲು ಮುಂದಾಗುತ್ತಾರೆ. ಇದರಿಂದ ಆರ್ಥಿಕ ಚಟುವಟಿಕೆ ತೀವ್ರಗೊಂಡು, ಆರ್ಥಿಕ ಹಿಂಜರಿತ ಪರಿಸ್ಥಿತಿ ಸುಧಾರಿಸುತ್ತಾ ಹೋಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಸದ್ಯ “ಹೆಲಿಕಾಪ್ಟರ್ ಮನಿ” ಚರ್ಚೆಯ ಜೊತೆಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಾ? ಕುಸಿದಿರುವ ಆರ್ಥಿಕತೆ ಆ ಕ್ಷಣಕ್ಕೆ ಚೇತರಿಕೆ ಕಂಡರೂ ಭವಿಷ್ಯದಲ್ಲಿ ಮತ್ತಷ್ಟು ತೊಂದರೆ ಉಂಟಾಗುತ್ತಾ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.








