ಬೆಂಗಳೂರು : ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎಂ.ವಿ ರಾಜಶೇಖರನ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕಳೆದ ಎರಡು ತಿಂಗಳಿನಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ರಾಜಶೇಖರನ್ ಮೃತಪಟ್ಟಿದ್ದಾರೆ.
ರಾಜಶೇಖರನ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನೂ ನಿರ್ವಹಿಸಿದ್ದರು. ಇನ್ನು, ರಾಜಶೇಖರನ್ ರಿಗೆ 91 ವರ್ಷ ವಯಸ್ಸಾಗಿತ್ತು.
ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ದ ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣ ಅಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. ಡಾ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಯೋಜನೆ ಮತ್ತು ಅಂಕಿ ಅಂಶ ಖಾತೆಯ ರಾಜ್ಯ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು.
ಇನ್ನು ರಾಜಶೇಖರನ್ ಅವರ ನಿಧನಕ್ಕೆ ರಾಜ್ಯದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.







