ಮೈಸೂರು: ಕೊರೊನಾಸುರನ ಹೊಡೆತಕ್ಕೆ ಮೈಸೂರು ತತ್ತರಿಸಿ ಹೋಗಿದೆ. ಲಾಕ್ ಡೌನ್ ಹಿನ್ನೆಲೆ ಅಗತ್ಯ ವಸ್ತುಗಳ ಕೊರತೆಯಿಂದ ಬಡವರ್ಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ನಾಗನಹಳ್ಳಿ ಬಳಿಯ ಮೊತ್ತ ಹಾಡಿಯ ಜನರ ಬದುಕು ಬರ್ಬಾದ್ ಆಗಿದ್ದು, ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಲಾಕ್ ಡೌನ್ ಮಾಡಿ ನಾವು ಹೊರಗೆ ಹೋಗದಂತೆ ನಿರ್ಬಂಧ ಹೇರಿದ್ದಾರೆ. ಇದರಿಂದ ದುಡಿಯಲು ಕೂಲಿ ಸಿಕ್ತಿಲ್ಲ. ಕೊಂಡು ತಿನ್ನಲು ಕೈಯಲ್ಲಿ ಕಾಸಿಲ್ಲ. ಹೀಗಾದ್ರೆ ನಾವು ಜೀವನ ನಡೆಸೋದು ಹೇಗೆ ಎಂದು ಹಾಡಿಯಲ್ಲಿನ ಮಹಿಳೆಯರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಇನ್ನು ನಮಗೆ ಅನ್ನಭಾಗ್ಯದ ಅಕ್ಕಿ ಬಿಟ್ಟರೆ ಬೇರೇನೂ ಅಗತ್ಯ ವಸ್ತುಗಳು ಸಿಕ್ಕಿಲ್ಲ. ಕೇವಲ ಅಕ್ಕಿ ಬೇಯಿಸಿ ತಿನ್ನಲು ಆಗುತ್ತಾ..? ಸರ್ಕಾರ ಮಾತ್ರ ಎಲ್ಲವನ್ನೂ ಒದಗಿಸುತ್ತಿದ್ದೇವೆ ಅಂತಾ ಹೇಳ್ತಿದೆ. ಆದ್ರೆ, ಇಲ್ಲಿ ಉಪ್ಪು ಎಣ್ಣೆ, ತರಕಾರಿ, ಕಿರಾಣಿ ಸಾಮಾಗ್ರಿಗಳು ಇಲ್ಲದೇ ಹಸುಗೂಸುಗಳ ಹಸಿವನ್ನು ನಾವು ಹೇಗೆ ನೀಗಿಸೋದು ಎಂದು ಒಂದು ಹೊತ್ತಿನ ತುತ್ತಿಗೆ ಅಂಗಲಾಚುತ್ತಿದ್ದಾರೆ.








