ಕನ್ಯಾಪರೀಕ್ಷೆಯಲ್ಲಿ ವಿಫಲರಾದರೆಂದು ಅಕ್ಕತಂಗಿಯರನ್ನ ಮನೆಯಿಂದ ಆಚೆ ಹಾಕಿದರು..!
ಕೊಲ್ಹಾಪುರ : ಮದುವೆಯಾಗಿ ವಾರದೊಳಗೇ ಪತ್ನಿಯರ ಶೀಲ ಶಂಕಿಸಿ ಅವರನ್ನ ಗಂಡನ ಮನೆಯವರು ಹೊರದಬ್ಬಿದ್ದು, ಪಂಚಾಯತಿ ಸದಸ್ಯರು, ಸ್ಥಳೀಯ ಮುಖಂಡರು ಸಹ ಗಂಡನ ಮನೆಯವರ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಇದೀಗ ಇಬ್ಬರೂ ಅಕ್ಕ ತಂಗಿಯರು ನ್ಯಾಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಗಂಡಂದಿರ ಮನೆಯವರು ಹಾಗೂ ಊರಿನ ಸರಪಂಚ್ ಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ.
2020 ನವೆಂಬರ್ ನಲ್ಲಿ ಇಬ್ಬರು ಅಕ್ಕತಂಗಿಯರು ಬೆಳಗಾವಿಯ ಒಂದೇ ಸಮುದಾಯದ ಸಹೋದರರನ್ನು ವಿವಾಹವಾಗಗಿದ್ದರು. ಮೊದಲ ರಾತ್ರಿಯಂದು ಅವರ ಸಮುದಾಯದ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ತಂಗಿ ಪಾಸ್ ಆಗಿದ್ದಾಳೆ. ಹಾಗಾಗಿ ಅಕ್ಕನ ಮೇಲೆ ಶೀಲ ಕಳೆದುಕೊಂಡ ಆರೋಪವನ್ನು ಹೊರಿಸಿ ಆಕೆಯ ತಂಗಿ ಎಂಬ ಹಣೆಪಟ್ಟಿ ಕಟ್ಟಿ ತಂಗಿಯನ್ನೂ ಮನೆಯಿಂದ ಆಚೆ ಹಾಕಿದ್ದಾರೆ.
ಈ ವಿಚಾರವಾಗಿ ಸ್ಥಳೀಯ ಜಾತಿಯ ಮುಖಂಡರೂ ಪಂಚಾಯತ್ ಬೆಂಬಲಿಸಿವೆ. ಮಹಿಳೆಯರಿಗೆ ಅವರ ಪತಿಯಂದಿರು ಮೌಖಿಕವಾಗಿ ನೀಡಿದ ವಿಚ್ಛೇಧನಕ್ಕೆ ಪಂಚಾಯತ್ ಒಪ್ಪಿಗೆಯನ್ನು ನೀಡಿದೆ.
ಸಹೋದರಿಯರು ಸಹಾಯಕ್ಕಾಗಿ ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮುಲನ್ ಸಮಿತಿಯನ್ನು ಸಂಪರ್ಕಿಸಿ ಗಂಡಂದಿರ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರರು ಮತ್ತು ಅವರ ತಾಯಿ ಸೇರಿದಂತೆ 8 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ಪಂಚಾಯತ್ ಮುಖಂಡರ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








