ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಇದಕ್ಕೆ ಬಿಡಿಎ ನಿವೇಶನ ಮಾರಾಟಕ್ಕೆ ಮುಂದಾಗಿರುವುದೇ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸದ್ಯ ಲಾಕ್ ಡೌನ್ ನಿಂದಾಗಿ ಅಬಕಾರಿ ಮತ್ತು ನೋಂದಣಿ ನಿಂತಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಣ ಕಷ್ಟ. ಆದ್ರೆ ರಾಜ್ಯ ಸರ್ಕಾರ ಅನಗತ್ಯವಾಗಿ ಖರ್ಚು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕ ಆಗಿಲ್ಲ. ಆದರೂ ಅವರ ಹೆಸರಲ್ಲಿ ಕಾರನ್ನ ಚೇರ್ಮನ್ ಎಂಜಾಯ್ ಮಾಡ್ತಿರುತ್ತಾನೆ. ಮೊದ್ಲು ಇಂತಹದ್ದಕ್ಕೆ ಕಡಿವಾಣ ಹಾಕಬೇಕು. ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ರೀತಿ ಮಾಡಬೇಕು ಎಂದು ಸಲಹೆ ನೀಡಿದರು.
ಆರ್ಥಿಕ ದಿವಾಳಿತನಕ್ಕೆ ಕಾರಣಗಳು:
ಇನ್ನು ಆರ್ಥಿಕ ದಿವಾಳಿತನಕ್ಕೆ ಸಿದ್ದರಾಮಯ್ಯ ಕಾರಣಗಳನ್ನು ನೀಡಿದ್ದು, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ಹಣ ಕೊಟ್ಟಿಲ್ಲ. ರಾಜ್ಯದಲ್ಲಿ ಆರ್ಥಿಕ ನಿರ್ವಹಣೆ ಮಾಡಲು ಅನುಭವದ ಕೊರತೆ ಇದೆ. ತೆರಿಗೆ ಸಂಗ್ರಹ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಜಿಎಸ್ಟಿ ನಿರ್ವಹಣೆ ಮಾಡಲು ಬಂದಿಲ್ಲ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕದಿರುವುದು. ಸರ್ಕಾರದಲ್ಲಿ ಭ್ರಷ್ಟಾಚಾರ ನಿಯಂತ್ರಿಸದಿರುವುದು ಆರ್ಥಿಕ ದಿವಾಳಿಗೆ ಕಾರಣವಾಗಿದೆ ಎಂದಿದ್ದಾರೆ.








