ಕುಶಾಲನಗರದಲ್ಲಿ 25 ಮಂದಿಗೆ ಕೊರೊನಾ ಪಾಸಿಟಿವ್
ಮಡಿಕೇರಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಕೊಡಗಿನ ಕುಶಾಲನಗರದಲ್ಲಿ 25 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕುಶಾಲನಗರದ ಗೋಪಾಲ್ ಸರ್ಕಲ್ ನ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಆ ಮಹಿಳೆಯ ಶವವನ್ನು ಕುಶಾಲನಗರಕ್ಕೆ ತಂದು ಸಂಸ್ಕಾರ ಮಾಡಲಾಗಿತ್ತು. ಮೃತಪಟ್ಟ ಮಹಿಳೆಯ ಮಗಳಿಗೆ ಕೊರೊನಾ ಸೋಂಕಿ ಇದ್ದು, ಆಕೆಯೂ ಶವ ಸಂಸ್ಕಾರದಲ್ಲಿ ಎಲ್ಲರಂತೆ ಭಾಗವಹಿಸಿದ್ದರು. ಹಾಗಾಗಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ 25 ಜನರಿಗೆ ಕೋವಿಡ್ ಹರಡಿದೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ ನೀಡಿ, ಸೋಂಕು ಇರುವುದು ದೃಢಪಡುತ್ತಿದ್ದಂತೆ ಅವರಿಗೆ ಸೀಲ್ ಹಾಕಬೇಕು. ಮನೆಯ ಸುತ್ತಮುತ್ತಲಿನವರಿಗೆ ಪರೀಕ್ಷೆ ಮಾಡಬೇಕು. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.










