ಐಪಿಎಲ್ 2021- ಡೆಲ್ಲಿ ಗೆಲುವಿನ ಹಾದಿಗೆ ಸಹಕರಿಸಿದ ಜಸ್ಪ್ರಿತ್ ಬೂಮ್ರಾ ನೋಬಾಲ್ ಎಸೆತಗಳು…!
ಅಮಿತ್ ಮಿಶ್ರಾ ಅವರ ಸ್ಪಿನ್ ಜಾದೂ ಹಾಗೂ ಶಿಖರ್ ಧವನ್ ಅವರ ಸಮಯೋಚಿತ ಆಟದ ನೆರವನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರು ವಿಕೆಟ್ ಗಳಿಂದ ಪರಾಭವಗೊಳಿಸಿತ್ತು.
ಚೆನ್ನೈ ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ 1 ರನ್ ಗಳಿಸಿ ಮಾರ್ಕಸ್ ಸ್ಟೋನಿಸ್ ಅವರಿಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ರೋಹಿತ್ ಶರ್ಮಾ ಜೊತೆ ಸೇರಿಕೊಂಡ ಸ್ಕೈ ಖ್ಯಾತಿಯ ಸೂರ್ಯಕುಮಾರ್ ಯಾದವ್ ಬಿರುಸಿನ 24 ರನ್ ಗಳಿಸಿ ಆವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದ್ರು.
ಮತ್ತೊಂದೆಡೆ ರೋಹಿತ್ ಶರ್ಮಾ ಜವಾಬ್ದಾರಿಯುತ ಆಟವನ್ನಾಡಿದ್ರೂ ಅವರ ಹೋರಾಟ 44 ರನ್ ಗೆ ಕೊನೆಗೊಂಡಿತ್ತು. ಅಮಿತ್ ಮಿಶ್ರಾ ಅವರ ಸ್ಪಿನ್ ಜಾದುಗೆ ರೋಹಿತ್ ಬಲಿಯಾದ್ರು.
ಇನ್ನೊಂದೆಡೆ ಇಶಾನ್ ಕಿಶಾನ್ ಕೂಡ ಹೆಚ್ಚು ಸಮಯ ಕ್ರೀಸ್ ನಲ್ಲಿ ಉಳಿಯಲಿಲ್ಲ. 26 ರನ್ ಗಳಿಸುವಷ್ಟರಲ್ಲಿ ಇಶಾನ್ ಅಮಿತ್ ಮಿಶ್ರಾಗೆ ಬಲಿಯಾದ್ರು. ಅಪಾಯಕಾರಿ ಹಾರ್ದಿಕ್ ಪಾಂಡ್ಯ ಅವರನ್ನು ಕೂಡ ಅಮಿತ್ ಮಿಶ್ರಾ ಶೂನ್ಯ ಸುತ್ತುವಂತೆ ಮಾಡಿದ್ರು. ಹಾಗೇ ಕೃನಾಲ್ ಪಾಂಡ್ಯ 1 ರನ್ ಗಳಿಸಿ ಲಲಿತ್ ಯಾದವ್ ಗೆ ವಿಕೆಟ್ ಒಪ್ಪಿಸಿದ್ರೆ, ಕಿರಾನ್ ಪೊಲಾರ್ಡ್ 2 ರನ್ ಗಳಿಸಿ ಅಮಿತ್ ಮಿಶ್ರಾಗೆ ನಾಲ್ಕನೇ ಬಲಿಯಾದ್ರು.
ಕೆಳ ಕ್ರಮಾಂಕದಲ್ಲಿ ಜಯಂತ್ ಯಾದವ್ 23 ರನ್ ಗಳಿಸಿದ್ರೆ, ರಾಹುಲ್ ಚಾಹರ್ 6 ರನ್ ಗಳಿಸಿದ್ರು. ಜಸ್ಪ್ರಿತ್ ಬೂಮ್ರಾ ಅಜೇಯ 3 ರನ್ ಹಾಗೂ ಟ್ರೆಂಟ್ ಬೌಲ್ಟ್ ಅಜೇಯ 1 ರನ್ ಗಳಿಸಿದ್ರು. ಪರಿಣಾಂ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 137 ರನ್ ದಾಖಲಿಸಿತ್ತು.
ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತ್ತು. ಶಾ ಅಬ್ಬರ ಕೇವಲ ಏಳು ರನ್ ಗೆ ಅಂತ್ಯಗೊಂಡಿತ್ತು.
ನಂತರ ಶಿಖರ್ ಧವನ್ ಮತ್ತು ಸ್ಟೀವನ್ ಸ್ಮಿತ್ ಎರಡನೇ ವಿಕೆಟ್ ಗೆ 53 ರನ್ ಕಲೆ ಹಾಕಿದ್ರು. ಈ ಹಂತದಲ್ಲಿ 33 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್ ಕಿಲಾನ್ ಪೊಲಾರ್ಡ್ ಅವರ ಎಲ್ ಬಿ ಬಲೆಗೆ ಬೀಳಿಸಿದ್ರು.
ಬಳಿಕ 42 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ 45 ರನ್ ಸಿಡಿಸಿದ್ದ ಶಿಖರ್ ಧವನ್ ಕೂಡ ಪೆವಿಲಿಯನ್ ದಾರಿ ಸೇರಿಕೊಂಡ್ರು.
ನಂತರ ನಾಯಕ ರಿಷಬ್ ಪಂತ್ ಲಲಿತ್ ಯಾದವ್ ಜೊತೆ ಸೇರಿಕೊಂಡ್ರು. ಆದ್ರೆ ಪಂತ್ ಏಳು ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಇನ್ನೇನೂ ಮುಂಬೈ ಇಂಡಿಯನ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಳ್ಳುವ ಹಂತದಲ್ಲಿ ಲಲಿತ್ ಯಾದವ್ ಮತ್ತು ಶಿಮ್ರೋನ್ ಹೆಟ್ಮರ್ ಅಡ್ಡಿಯನ್ನುಂಟು ಮಾಡಿದ್ರು. ಜಸ್ಪ್ರಿತ್ ಬೂಮ್ರಾ ಅವರ ನೋಬಾಲ್ ಎಸೆತಗಳ ಲಾಭ ಪಡೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಐದು ಎಸೆತಗಳಿರುವಂತೆ ಗೆಲುವಿನ ನಗೆ ಬೀರಿತ್ತು.
ಲಲಿತ್ ಯಾದವ್ ಅಜೇಯ 22 ರನ್ ಗಳಿಸಿದ್ರೆ, ಶಿಮ್ರೋನ್ ಹೆಟ್ಮೇರ್ ಅಜೇಯ 14 ರನ್ ದಾಖಲಿಸಿದ್ರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ 138 ರನ್ ಗಳಿಸಿತ್ತು.
4 ಓವರ್ ಗಳಲ್ಲಿ 24 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದ ಅಮಿತ್ ಮಿಶ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








