ಬೆಂಗಳೂರು: ಕೊರೊನಾಸುರನ ಹೊಡೆತಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ರಾಜ್ಯದಲ್ಲೂ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಶಾಸಕರು ಹಾಗೂ ಪರಿಷತ್ ಸದಸ್ಯರ ವೇತನ ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ. ಇದೀಗ ಈ ಶಿಫಾರಸ್ಸಿಗೆ ರಾಜ್ಯಪಾಲ ಡಾ.ವಜೂಭಾಯಿ ವಾಲಾ ಅಂಕಿತ ಹಾಕಿದ್ದಾರೆ.
2020 ಏಪ್ರಿಲ್ನಿಂದ 2021ರ ಮಾರ್ಚ್ ವರೆಗಿನ ಜನಪ್ರತಿನಿಧಿಗಳ ವೇತನದಲ್ಲಿ ಶೇ.30 ರಷ್ಟು ಕಡಿತವಾಗಬೇಕೆಂದು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಕಡಿತವಾಗುವ ಜನಪ್ರತಿನಿಧಿಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತೆಗೆದುಕೊಂಡು, ಅದರ ಮೂಲಕ ಸಾರ್ವಜನಿಕರ ಅನುಕೂಲಕ್ಕೆ ಬಳಸಲಾಗುತ್ತದೆ. ಈ ಸಂಬಂಧ ಇಂದು ವಜೂಭಾಯಿ ವಾಲಾ ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆಯ ಸ್ಪೀಕರ್, ಮುಖ್ಯಮಂತ್ರಿಗಳು, ಉಪ- ಮುಖ್ಯಮಂತ್ರಿಗಳು, ಸಚಿವರು, ವಿಧಾನಸಭೆಯ ವಿಪಕ್ಷ ನಾಯಕರು, ವಿಧಾನಸಭೆಯ ಮುಖ್ಯ ಸಚೇತಕರು, ಶಾಸಕರು, ವಿಧಾನಪರಿಷತ್ ಸಭಾಪತಿ, ವಿಧಾನಪರಿಷತ್ ವಿಪಕ್ಷ ನಾಯಕರು, ಪರಿಷತ್ನ ಮುಖ್ಯ ಸಚೇತಕರು ಸೇರಿದಂತೆ ಎಲ್ಲರ ವೇತನ ಕಡಿತ ಮಾಡಲು ಈ ತಿಂಗಳಿಂದಲೇ ಜಾರಿಗೆ ಬರುವಂತೆ ರಾಜ್ಯಪಾಲರಿಂದ ಆದೇಶ ಹೊರಬಿದ್ದಿದೆ.








