ಮೊರದಾಬಾದ್: ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಕರೆ ತರಲು ಹೋಗಿದ್ದ ವೈದ್ಯಕೀಯ ತಂಡ ಹಾಗೂ ಪೊಲೀಸ್ ವಾಹನಗಳ ಮೇಲೆ ಕೆಲವು ಮಂದಿ ಅಪರಿಚಿತರು ಕಲ್ಲು ತೂರಾಟ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದಿದೆ. ಘಟನೆಯಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳ ತಂಡಕ್ಕೆ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲವಾದರೂ ಕಲ್ಲು ತೂರಿದ ಪರಿಣಾಮ ಪೊಲೀಸ್ ಹಾಗೂ ಆಂಬುಲೆನ್ಸ್ ವಾಹನಗಳ ಗಾಜುಗಳು ಪುಡಿಪುಡಿಯಾಗಿದ್ದು, ಸಂಪೂರ್ಣವಾಗಿ ಜಖಂಗೊಂಡಿದೆ.
ಇಂಟರ್ಲಾಕ್, ಇಟ್ಟಿಗೆ, ದೊಡ್ಡದಾದ ಕಲ್ಲುಗಳನ್ನು ಉಪಯೋಗಿಸಿ ಆಕ್ರಮಣ ನಡೆಸಲಾಗಿತ್ತು. ಇದರ ಹಿಂದೆ ಸ್ಥಳೀಯರ ಕೈವಾಡವಿದೆಯೇ ಎಂಬುದು ತಿಳಿದಿಲ್ಲ. ಇದೀಗ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಆರೋಪಿಗಳನ್ನು ಬಂಧಿಸಿರುವುದರ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿಲ್ಲ.








