“ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲ್ಲ” : ಸುಧಾಕರ್
ಬೆಂಗಳೂರು : ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಆದ್ರೆ ಇದೀಗ ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಲಸಿಕೆ ವಿತರಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಅದರ ಅನ್ವಯ 3 – 3.5 ಕೋಟಿ ಜನ ಕರ್ನಾಟಕದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. 1 ಕೋಟಿ ಕೋವಿ ಶೀಲ್ಡ್ ಗೆ 400 ಕೋಟಿ ಕೊಟ್ಟು ಆರ್ಡರ್ ಮಾಡಿದ್ದೇವೆ.

28ನೇ ತಾರಿಕಿನಿಂದ ನೊಂದಣಿ ಆರಂಭವಾಗಿದೆ, ನೋಂದಣಿ ಮಾಡಿಕೊಳ್ಳಿ. ಆದ್ರೆ ಮೇ ಒಂದರಿಂದ ಆರಂಭವಾಗಬೇಕಿದ್ದ ಲಸಿಕೆ ಆರಂಭವಾಗಲ್ಲ. ಕಂಪೆನಿಗಳು ಯಾವಾಗ ಕೊಡುತ್ತೆ ಅಂತ ಇದುವರೆಗೆ ನಮಗೆ ಮಾಹಿತಿ ಬಂದಿಲ್ಲ. ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು ಅಂತ ಮನವಿ ಮಾಡುತ್ತೇನೆ ಎಂದರು.
ಇದೇ ವೇಳೆ ರಾಜ್ಯದ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡುತ್ತೇವೆ. 45 ವರ್ಷ ಮೇಲ್ಪಟ್ಟವರಿಗೆ ಈಗ ಉಚಿತವಾಗಿ ನೀಡುತ್ತಿರುವ ಲಸಿಕೆ ನೀಡಿಕೆ ಯತವತ್ತಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.









