ಚಾಮರಾಜನಗರ ದುರಂತ – ಮೃತರ ಕುಟುಂಬಗಳ ನೆರವಿಗೆ ಧಾವಿಸಿದ ಕಿಚ್ಚ
ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ದುರಂತದಲ್ಲಿ ಮಡಿದ ಕುಟುಂಬಕ್ಕೆ ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೆರವಾಗಲು ಮುಂದಾಗಿದ್ದಾರೆ. ಹೌದು. ಆಕ್ಸಿಜನ್ ಸಿಗದೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ವಿಚಾರ ರಾಷ್ಟ್ರವ್ಯಾಪಿ ಭಾರೀ ಸುದ್ದಿಯಾಗಿತ್ತು. ಇದೀಗ ಈ ಕುಟುಂಬಗಳ ಕಣ್ಣೀರೊರೆಸಲು ಸುದೀಪ್ ಮುಂದಾಗಿದ್ದಾರೆ.
24 ಕುಟುಂಬಗಳಲ್ಲಿ ತುಂಬಾನೇ ಅವಶ್ಯಕತೆ ಇರುವ 12 ಫ್ಯಾಮಿಲಿಗಳ ಸಂಪೂರ್ಣ ಜವಾಬ್ದಾರಿಯನ್ನು ಕಿಚ್ಚನ ಚಾರಿಟೇಬಲ್ ಟ್ರಸ್ಟ್ ವಹಿಸಿಕೊಂಡಿದೆ. ಅವಶ್ಯಕ ವಸ್ತುಗಳನ್ನು ಪೂರೈಸಲು ಟ್ರಸ್ಟ್ ಮುಂದಾಗಿದೆ. ಅಲ್ಲದೆ ಈ 12 ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಟ್ರಸ್ಟ್ ಸಹಾಯ ಹಸ್ತ ಚಾಚಲಿದೆ.
ಈ ಸಂಬಂಧ ಟ್ರಸ್ಟ್ ಸದಸ್ಯ ರಮೇಶ್ ಪ್ರತಿಕ್ರಿಯಿಸಿ, ದುರಂತ ನಡೆದ ಮರುದಿನವೇ ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ. ಸಾವನ್ನಪ್ಪಿರುವ 24 ಮಂದಿಯ ಮನೆಗಳಿಗೂ ಭೇಟಿ ಕೊಟ್ಟಿದ್ದೇವೆ. ಅವುಗಳಲ್ಲಿ 12 ಮನೆಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ಆ ಕುಟುಂಬಗಳ ಜವಾಬ್ದಾರಿಯನ್ನು ಟ್ರಸ್ಟ್ ವಹಿಸಿಕೊಂಡಿದೆ. ಅಲ್ಲದೆ 12 ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೂ ಟ್ರಸ್ಟ್ ನೆರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.