ನವದೆಹಲಿ: ಪ್ರಪಂಚದಾದ್ಯಂತ ಕೊರೊನಾ ವೈರಸ್ ರುದ್ರ ನರ್ತನ ಮಾಡುತ್ತಾ ಮರಣ ಮೃದಂಗವನ್ನು ಮುಂದುವರಿಸುತ್ತಿದೆ. ಈಗಾಗಲೇ ಹೆಮ್ಮಾರಿಯ ಹೊಡೆತಕ್ಕೆ ಇಡೀ ವಿಶ್ವವೇ ಸ್ತಬ್ಧವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತ ಭಾರತದಲ್ಲೂ ಕೊರೊನಾಸುರನ ಅಬ್ಬರ ಜೋರಾಗಿದ್ದು, ಇದುವರೆಗೂ 14 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದೆ. ಏತನ್ಮಧ್ಯೆ ಕೊರೊನಾ ವಿರುದ್ಧ ಹೋರಾಡಲು ಭಾರತ ಸಾರ್ಕ್ ರಾಷ್ಟ್ರಗಳಿಗೆ ತರಬೇತಿ ನೀಡಲಿದೆ. ಇದಕ್ಕಾಗಿ ಸರ್ಕಾರ, 76 ಸಾವಿರ ಕೋಟಿ ರೂಪಾಯಿ ಯೋಜನೆಯನ್ನು ಘೋಷಣೆ ಮಾಡಿದೆ.
ಆನ್ ಲೈನ್ ಮೂಲಕ ತರಬೇತಿ!
ಕೊರೊನಾ ವೈರಸ್ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ, ಭಾರತ ಸಾರ್ಕ್ ರಾಷ್ಟ್ರಗಳಿಗೆ ತರಬೇತಿ ನೀಡಲಿದೆ. ರ‍್ಯಾಪಿಡ್ ರೆಸ್ಪಾನ್ಸ್ ವೈದ್ಯಕೀಯ ಟೀಮ್ ಗಳ ಮೂಲಕ ಸಾರ್ಕ್ ರಾಷ್ಟ್ರಗಳಿಗೆ ಕೊರೊನಾ ವಿರುದ್ಧ ಹೋರಾಡಲು ಆನ್ ಲೈನ್ ತರಬೇತಿ ನೀಡಲು ಭಾರತ ಮುಂದಾಗಿದೆ. ಭಾರತೀಯ ತಾಂತ್ರಿಕ ಹಾಗೂ ಆರ್ಥಿಕ ಯೋಜನೆಯಡಿ ಈ ಬಗ್ಗೆ ನಿರ್ಧಾರಕ್ಕೆ ಬಂದಿದ್ದು, ಸಾರ್ಕ್ ದೇಶಗಳ ವೈದ್ಯಕೀಯ ತಂಡಗಳಿಗೆ ವೆಬ್ ಆಧಾರಿತ ತರಬೇತಿ ನೀಡಲಾಗುತ್ತದೆ.








