ಹಾಸನ : ಲಾಕ್ ಡೌನ್ ನಡುವೆ ಜಿಲ್ಲೆಯಲ್ಲಿ ಕೆಲವು ಬಾರ್ ಗಳಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡಲಾಗುತ್ತಿದೆ. ಆದ್ರೆ ಮಾಲೀಕರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದು ವೇಳೆ ಎಣ್ಣೆ ಕುಡಿದು ಯಾರಾದರೂ ಸತ್ತರೇ ನಾವು ನಾವು ಜವಾಬ್ದಾರಿಯಲ್ಲ. ಇದಕ್ಕೆ ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಹಾಸನದ ಜಿಲ್ಲಾಧಿಕಾರಿಯೇ ಹೊಣೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ಜಿಲ್ಲಾಧಿಕಾರಿ ಬಿಜೆಪಿ ಪರ ಕೆಸಲ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಕೇವಲ 24 ಬಾರ್ ಗಳ ಮೇಲೆ ಮಾತ್ರ ದಾಳಿ ಮಾಡಲಾಗಿದೆ. ಬೇರೆಯವರ ಬಾರ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸುತ್ತಿಲ್ಲ. ಹಳೆಯ ದ್ರಾಕ್ಷಿ ಮತ್ತು ಸಕ್ಕರೆಯಿಂದ ಕಳ್ಳ ಭಟ್ಟಿ ಸಾರಾಯಿ ತಯಾರಿಸಲಾಗುತ್ತಿದೆ. ಆದ್ದರಿಂದ ಹಾಸನದಲ್ಲಿ ಯಾರಾದರೂ ಸತ್ತರೆ ನಾವು ಹೊಣೆಯಲ್ಲ ಎಂದರು.
ಇನ್ನು ಕೆಲವರು ಕಳ್ಳ ಭಟ್ಟಿ ಎಣ್ಣೆ ಮಾರಲು ಕೈಜೋಡಿಸಿದ್ದಾರೆ. ಡಿಸಿ ಯಾರ ಹಂಗಿನಲ್ಲೂ ಕೆಲಸ ಮಾಡಬಾರದು. ಬದಲಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಒಬ್ಬ ಸರ್ಕಲ್ ಇನ್ಸ್ ಪೆಕ್ಟರ್ ಸೈಟ್ ಮಾಡಿ ದಂಧೆ ಮಾಡುತ್ತಿದ್ದಾನೆ. ಇದರಲ್ಲಿ ನೇರ ಜಿಲ್ಲಾಡಳಿತವೇ ಭಾಗಿಯಾಗಿದೆ ಎಂದು ಕುಟುಕಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ಹಾಸನ ಜಿಲ್ಲೆಯಲ್ಲಿ ಕೋಟ್ಯಾಂತರ ಮೌಲ್ಯದ ಹೂವು ಮತ್ತು ತೋಟಗಾರಿಕಾ ಬೆಳೆ ಹಾಳಾಗುತ್ತಿದೆ. ಸರ್ಕಾರ ರೈತರ ಬೆಳೆ ಖರೀದಿಸದಿದ್ದರೆ, ಜಿಲ್ಲೆಯ ಆರು ಮಂದಿ ಶಾಸಕರು ಡಿಸಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.








