ಶಿಲ್ಪಾ ನಾಗ್ ಅವರ ಪರ ಕೆ.ಎಸ್.ಈಶ್ವರಪ್ಪ ಬ್ಯಾಟಿಂಗ್
ಶಿವಮೊಗ್ಗ : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಕಿತ್ತಾಟ ರಾಜ್ಯದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.
ಈ ಬಗ್ಗೆ ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಒಳ್ಳೆಯ ಐಎಎಸ್ ಅಧಿಕಾರಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಮೈಸೂರಿನ ಡಿಸಿ ಹಾಗೂ ಕಮೀಷನರ್ ನಡುವೆ ಗೊಂದಲವಿದೆ. ಇಬ್ಬರ ನಡುವಿನ ಗೊಂದಲ ಬಹಿರಂಗವಾಗಿರುವುದನ್ನು ನಮ್ಮ ಸರ್ಕಾರ ಸಹಿಸಲ್ಲ.
ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದರು.
ಯಾವುದೇ ಅಧಿಕಾರಿಗಳು ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ. ರೋಹಿಣಿ ಸಿಂಧೂರಿ ಅವರು ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿಲ್ಲ, ಹೀಗಾಗಿ ಅವರ ಬಗ್ಗೆ ನನಗೆ ಗೊತ್ತಿಲ್ಲ.
ಶಿಲ್ಪಾ ನಾಗ್ ಮೊನ್ನೆಯವರೆಗೂ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಇಲಾಖೆಯಲ್ಲಿ ಇರುವಷ್ಟು ದಿನ ಶಿಲ್ಪಾ ನಾಗ್ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಈ ಘಟನೆ ಹೇಗೆ ನಡೆಯಿತು ಎಂದು ನನಗೆ ಗೂತ್ತಿಲ್ಲ ಎಂದರು.









