ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಐದು ದಿನ ಸಂಪೂರ್ಣ ಲಾಕ್ ಡೌನ್
ಮಂಡ್ಯ : ಕೊರೊನಾ ವೈರಸ್ ಗೆ ಬ್ರೇಕ್ ಹಾಕಲು ಮಂಡ್ಯ ಜಿಲ್ಲಾಡಳಿತ ಇದೀಗ ಮತ್ತೆ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಸ್. ಅಶ್ವಥಿ ಅವರು, ಮಂಡ್ಯ ಜಿಲ್ಲಾಡಳಿತ ಕಳೆದ ಎರಡು ವಾರದಲ್ಲಿ ಎಂಟು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮೊರೆ ಹೋದ ಕಾರಣ ಪ್ರತಿ ನಿತ್ಯ ಜಿಲ್ಲೆಯಲ್ಲಿ ದಾಖಲಾಗುತ್ತಿದ್ದ ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ಗಳು 500ರ ಗಡಿಗೆ ಬಂದು ನಿಂತಿದೆ.
ಇದೀಗ ಪಾಸಿಟಿವ್ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಹೀಗಾಗಿ ಜಿಲ್ಲೆಯಲ್ಲಿ ಜೂನ್ 7, 8, 10, 12 ಮತ್ತು 13 ರಂದು ಸಂಪೂರ್ಣ ಲಾಕ್ ಡೌನ್ ಜಾರಿ ಇರಲಿದೆ. ಈ ದಿನಗಳಲ್ಲಿ ಜಿಲ್ಲೆಯಲ್ಲಿ ಹಣ್ಣು, ತರಕಾರಿ, ದಿನಸಿ, ಮಾಂಸ ಖರೀದಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಉಳಿದಂತೆ ಬ್ಯಾಂಕ್ ಗಳು, ಹಾಲಿನ ಬೂತ್ ಗಳು, ಎಟಿಎಂ ಹಾಗೂ ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಆದ್ರೆ ಜೂನ್ 6, 9 ಮತ್ತು 11ರಂದು ಲಾಕ್ ಡೌನ್ ನನ್ನು ಸಡಿಲಗೊಳಿಸಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.








