ಅದೆಂತದೋ ಸಿಂಹ, ಎಂಥಾ ಸಿಂಹ.. ಪ್ರತಾಪ ಸಿಂಹ ; ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು : ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಕಿತ್ತಾಟದ ಬಗ್ಗೆ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅಲ್ಲದೇ ಸಂಸದ ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಎಂಪಿಯಾಗಿ ಅಧಿಕಾರಿಗಳ ಬೆಂಬಲಿಸೋದು ಅಥವಾ ವಿರೋಧಿಸೋದು ಸರಿಯಾ ಎಂದು ಪ್ರತಾಪ್ ಸಿಂಹ ಅವರನ್ನ ಪ್ರಶ್ನಿಸಿದರು.
ಅವರದೇ ಸರ್ಕಾರ ಇದೆ. ಅಲ್ಲದೆ ಅವರು ಎಂಪಿ, ಮಾನ ಮರ್ಯಾದೆ ಇರೋರು ಹೀಗೆಲ್ಲ ಮಾಡಲ್ಲ. ಮೈಸೂರು ಜಿಲ್ಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ.
ಈ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇನ್ನು ಅದೆಂತದೋ ಸಿಂಹ, ಎಂಥಾ ಸಿಂಹ.. ಪ್ರತಾಪ ಸಿಂಹ ಮೊದಲು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಗೆ ಸಪೋರ್ಟ್ ಮಾಡುತ್ತಿದ್ದರು.
ಆಮೇಲೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾನಾಗ್ ಗೆ ಸಪೋರ್ಟ್ ಮಾಡೋಕೆ ಶುರು ಮಾಡಿದರು. ಬಿಜೆಪಿ ಜನಪ್ರತಿನಿಧಿಗಳಿಂದಲೇ ಈ ಗಲಾಟೆ ನಡೆಯಿತು ಎಂದು ಕಿಡಿಕಾರಿದರು.
ಇದೇ ವೇಳೆ ಐಎಎಸ್ ಅಧಿಕಾರಿಗಳಿಗೆ ಸುದ್ದಿಗೋಷ್ಠಿ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರೋಹಿಣಿ ಸಿಂಧೂರಿ ಜಮೀನು ಒತ್ತುವರಿ ತಡೆಯೋಕೆ ಹೋಗಿದ್ದಕ್ಕೆ ಹೀಗಾಯ್ತು ಅಂದಿದ್ದಾರೆ.
ಇದರ ಬಗ್ಗೆ ತನಿಖೆ ಆಗಬೇಕು. ಅಧಿಕಾರಿಗಳನ್ನು ಹೊಗಳುವುದು, ತೆಗಳುವುದು ಜನಪ್ರತಿನಿಧಿಗಳ ಕೆಲಸವಲ್ಲ. ಜನರ ಕೆಲಸ ಮಾಡುವುದು ಜನ ಪ್ರತಿನಿಧಿಗಳ ಕೆಲಸ. ಎಲ್ಲಾ ಬೆಳವಣಿಗೆಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.










